

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ಮುನ್ನ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿಕೊಳ್ಳುವ, ಪಾತ್ರಕ್ಕಾಗಿ ತೂಕ ಹೆಚ್ಚು ಅಥವಾ ಕಡಿಮೆ ಮಾಡಿಕೊಂಡಿರುವ ನಟರನ್ನು ನೋಡಿರುತ್ತೇವೆ. ಆದರೆ, "ಗಂಡ ಹೆಂಡತಿ', "ಉಗ್ರಂ', "ಕರ್ವ' ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿರುವ ನಟ ತಿಲಕ್ ಶೇಖರ್ ಕಳೆದ 20 ವರ್ಷಗಳಿಂದ 75 ಕೆಜಿ ತೂಕವನ್ನೇ ಮೈಂಟೇನ್ ಮಾಡಿಕೊಂಡು ಬಂದಿದ್ದಾರಂತೆ. ಈ ಬಗ್ಗೆ ಖುದ್ದು ಅವರೇ, "ಜೀವನದಲ್ಲಿ ಎಲ್ಲವೂ ಬ್ಯಾಲನ್ಸ್ ಆಗಿರಬೇಕು. ಹಾಗಿದ್ದರೆ ಮಾತ್ರ ಜೀವನ ಚೆನ್ನಾಗಿರುತ್ತದೆ. ಆಹಾರದ ವಿಷಯದಲ್ಲೂ ಹಾಗೇ. 2006ರಲ್ಲಿ ರಿಲೀಸ್ ಆದ ನನ್ನ ಮೊದಲ "ಗಂಡ ಹೆಂಡತಿ' ಚಿತ್ರದಿಂದ ಇಲ್ಲಿಯವರೆಗೂ ಕಳೆದ 20 ವರ್ಷಗಳಿಂದ 75 ಕೆಜಿ ತೂಕವನ್ನೇ ಮೈಂಟೇನ್ ಮಾಡಿಕೊಂಡಿದ್ದೇನೆ. 74 ಆಗಿಲ್ಲ, 76 ಆಗಿಲ್ಲ. ಶೂಟಿಂಗ್ ಇರುವಾಗ ಕಟ್ಟುನಿಟ್ಟಾಗಿ ಡಯಟ್ ಮಾಡಲಾಗಲ್ಲ. ಆದರೆ, ಪ್ರತಿದಿನ ಒಂದು ತಾಸು ವರ್ಕೌಟ್ ತಪ್ಪಲ್ಲ. ಹಾಗೇ ಪ್ರೋಟಿನ್ ಯುಕ್ತ ಆಹಾರ ಹೆಚ್ಚಾಗಿ ಸೇವಿಸಿ, ಕಾರ್ಬ್ಸ್ ಕಡಿಮೆ ಮಾಡುತ್ತೇನೆ' ಎಂದು ಮಾಹಿತಿ ನೀಡುತ್ತಾರೆ.
ತಿಲಕ್, ಪ್ರಿಯಾ ಹೆಗ್ಡೆ ನಟಿಸಿರುವ ಪ್ರಭಾಕರ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ "ಉಸಿರು' ಇಂದು ಬಿಡುಗಡೆಯಾಗುತ್ತಿದ್ದು, ತಿಲಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. "ಪ್ರಭಾಕರ್ ಕಥೆ ಹೇಳಿದಾಗ, ಕಥೆಗೆ ಟೈಟಲ್ ಹೊಂದುವುದಿಲ್ಲ ಅಂತನ್ನಿಸಿತ್ತು. ಆದರೆ, ಶೂಟಿಂಗ್ ಸಾಗಿದಂತೆ ಇದೇ ಉತ್ತಮ ಶೀರ್ಷಿಕೆ ಅಂತ ಅನ್ನಿಸಿತು. ಇದು ಸಸ್ಪೆನ್ಸ್ ಥ್ರಿಲ್ಲರ್, ಮರ್ಡರ್ ಮಿಸ್ಟರಿ ಮಾತ್ರವಲ್ಲ ಅದರ ಜತೆಗೆ ಹಲವು ಕುತೂಹಲಕಾರಿ ಅಂಶಗಳಿವೆ' ಎಂದು ಹೇಳಿಕೊಳ್ಳುತ್ತಾರೆ.
"ಸಿನಿಮಾ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತವೆ. ನಾನು ಅವನ್ನು ಆಯ್ಕೆ ಮಾಡಿಕೊಳ್ಳಲ್ಲ. ಸಿನಿಮಾದಿಂದ ನಾನು, ನನ್ನಿಂದ ಸಿನಿಮಾ ಅಲ್ಲ. ನಾವು ಮಾಡಿದ ಎಲ್ಲ ಸಿನಿಮಾಗಳೂ ಹಿಟ್ ಆಗಬೇಕು, ಜನ ಮೆಚ್ಚಬೇಕು ಅಂತನೇ ಮಾಡುತ್ತೇವೆ. ಆದರೆ ಹಾಗಾಗುವುದಿಲ್ಲ. ಸೋಲು, ಗೆಲುವು ಪ್ರೇಕ್ಷಕರಿಗೆ ಬಿಟ್ಟಿದ್ದು. ನನ್ನ ಕರಿಯರ್ನಲ್ಲಿ ನಾಲ್ಕೆ$ದು ಸಿನಿಮಾಗಳು ಹಿಟ್ ಆಗಿವೆ. ಈಗಲೂ ನನ್ನ ಸಿನಿಮಾಗಳ ಬಗ್ಗೆ ಜನ ಮಾತನಾಡುತ್ತಾರೆ. ಹೀಗಾಗಿ ನಾನು ಅದೃಷ್ಟವಂತ. ಸೋಲು, ಗೆಲುವಿನ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಗೆದ್ದರೆ ಹಿಗ್ಗಲ್ಲ, ಸೋತರೆ ಕುಗ್ಗಲ್ಲ. ಗೆಲುವು ಸಿಗುತ್ತೆ. ಕೆಲಸ ಮಾಡುತ್ತಿರಬೇಕಷ್ಟೆ. ಜೀವನವೇ ಹಾಗಲ್ಲವೇ? ಏಳು-ಬೀಳು ಇದ್ದೇ ಇರುತ್ತದೆ' ಎಂದು ಹೇಳಿಕೊಳ್ಳುತ್ತಾರೆ ತಿಲಕ್. "ಉಸಿರು' ಬಳಿಕ ಅವರು ನಟಿಸಿರುವ "ವರ್ಣತರಂಗ', "ಸಿಗ್ಮಾ' ರಿಲೀಸ್ಗೆ ರೆಡಿಯಿವೆ. ಹಾಗೇ ಹಿಂದಿ ವೆಬ್ಸರಣಿಯೊಂದರ ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟನೆ ದೊರೆಯಲಿದೆ.