ಮತ್ತೆ ಉದ್ಭವ ವಿವಾದ!?; ನೈಜ ಘಟನೆಗಳನ್ನು ನೆನಪಿಸುವ ಸನ್ನಿವೇಶಗಳು

UDBHAVA
Published on

1990ರಲ್ಲಿ ತೆರೆ ಕಂಡಿದ್ದ ಅನಂತ್​ನಾಗ್ ಅಭಿನಯದ ‘ಉದ್ಭವ’ ಚಿತ್ರದ ಸೀಕ್ವೆಲ್ ಬರೋಬ್ಬರಿ 30 ವರ್ಷಗಳ ಬಳಿಕ ‘ಮತ್ತೆ ಉದ್ಭವ’ ಆಗಿ ಮೂಡಿಬಂದಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆಯೂ ಆಗಿದೆ. ‘ಉದ್ಭವ’ ಚಿತ್ರವನ್ನು ನಿರ್ದೇಶಿಸಿದ್ದ ಕೋಡ್ಲು ರಾಮಕೃಷ್ಣ ಅವರೇ ‘ಮತ್ತೆ ಉದ್ಭವ’ಕ್ಕೆ ಆಕ್ಷನ್-ಕಟ್ ಹೇಳಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಅವರು ಹಂಚಿಕೊಂಡಿರುವ ಅಂದಿನ-ಇಂದಿನ ಅನುಭವ, ಅನಿಸಿಕೆ, ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

‘ಅಂದು ‘ಉದ್ಭವ’ ಸಿನಿಮಾ ಮಾಡಿದ್ದಾಗ ಕೆಲವರು ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು, ಗಲಾಟೆ ಎಬ್ಬಿಸಿದ್ದರು. ಈಗ ‘ಮತ್ತೆ ಉದ್ಭವ’ ಸಿನಿಮಾ ಬಿಡುಗಡೆ ಆದಮೇಲೂ ಅಂಥದ್ದೇ ವಿವಾದ ಉಂಟಾದರೂ ಅಚ್ಚರಿ ಇಲ್ಲ..’ ಎನ್ನುತ್ತಲೇ ತಮ್ಮ ನೂತನ ಸಿನಿಮಾ ‘ಮತ್ತೆ ಉದ್ಭವ’ದ ಕುರಿತು ಮಾತನಾಡಿದರು ನಿರ್ದೇಶಕ ಕೋಡ್ಲು ರಾಮಕೃಷ್ಣ.

‘ಆ ಚಿತ್ರದಲ್ಲಿ ಒಂದು ಹಾಡಿನ ವಿಷಯಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಅದನ್ನು ತೆಗೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು, ಆದರೆ ನಾನು ತೆಗೆಯಲಿಲ್ಲ. ಈ ಚಿತ್ರದಲ್ಲಿ ಮೂವರು ಮುಖ್ಯಮಂತ್ರಿ, ಇಬ್ಬರು ಸ್ವಾಮೀಜಿಯ ಪಾತ್ರಗಳು ಬರುತ್ತವೆ. ಚಿತ್ರದಲ್ಲಿನ ಬಹಳಷ್ಟು ದೃಶ್ಯಗಳು ಜನರು ಇತ್ತೀಚೆಗೆ ಟಿವಿಯಲ್ಲಿ ನೋಡುತ್ತಿರುವ, ಪತ್ರಿಕೆಗಳಲ್ಲಿ ಓದುತ್ತಿರುವಂಥ ವಿಷಯಗಳೇ ಎನಿಸುತ್ತವೆ. ಹೀಗಾಗಿ ಯಾರಾದರೂ ತಕರಾರು ತೆಗೆದರೆ ಅಚ್ಚರಿ ಎನಿಸುವುದಿಲ್ಲ. ನಾನು ಮಾನಸಿಕವಾಗಿ ಅದಕ್ಕೆ ತಯಾರಾಗಿದ್ದೇನೆ’ ಎನ್ನುತ್ತಾರೆ ಕೋಡ್ಲು ರಾಮಕೃಷ್ಣ.

ಒಂದು ಅದ್ಭುತ ಯಶಸ್ಸು ಕಂಡ ಚಿತ್ರದ ಮುಂದುವರಿದ ಭಾಗ (ಸೀಕ್ವೆಲ್) ನಿರ್ಮಾಣ ಮಾಡಬೇಕು ಎಂದಾಗ ಒಂದು ಸಣ್ಣ ಆತಂಕ ಕಾಡುವುದು ಸಹಜ. ಅಷ್ಟು ದೊಡ್ಡ ಯಶಸ್ಸಿನ ಸಿನಿಮಾದ ಸೀಕ್ವೆಲ್ ಜನ ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಅಳುಕು ಸಾಮಾನ್ಯ. ಆದರೆ ಕೋಡ್ಲು ರಾಮಕೃಷ್ಣ ಅವರಿಗೆ ಅಂಥದ್ದೇನೂ ಅನಿಸಲಿಲ್ಲವಂತೆ. ‘ನಾನು ಸವಾಲುಗಳನ್ನು ಇಷ್ಟಪಡುವ ಮನುಷ್ಯ.

ಯಾವಾಗಲೂ ಚಾಲೆಂಜ್ ಸ್ವೀಕರಿಸುವುದು ನನಗಿಷ್ಟ. ನನಗೆ ಸಂಗೀತ ಜ್ಞಾನ ಇರದಿದ್ದರೂ ನನ್ನ ಎರಡನೇ ಪ್ರಯತ್ನದಲ್ಲೇ ಸಂಗೀತಮಯ ಸಿನಿಮಾ ‘ಮುರಳೀಗಾನ ಅಮೃತಪಾನ’ ನಿರ್ದೇಶಿಸಿದ್ದೆ. ನಿರ್ವಪಕರು ಸಂಗೀತಮಯ ಸಿನಿಮಾವೊಂದನ್ನು ಮಾಡಬೇಕು ಎಂದುಕೊಂಡು ಬಂದಾಗ ಅದರ ಬಗ್ಗೆ ಹೆಚ್ಚು ಗೊತ್ತಿರದಿದ್ದರೂ ಎಲ್ಲ ತಿಳಿದಿರುವವನಂತೆ ನಟಿಸಿ ಒಪ್ಪಿಕೊಂಡಿದ್ದೆ.

ಬಳಿಕ ಸಂಗೀತ ಸಂಯೋಜನೆ ವೇಳೆ ಯಾವ ರಾಗ ಹಾಕಬೇಕು ಎಂದು ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕೇಳಿದಾಗ ಸರಿಯಾದ ರಾಗದ ಹೆಸರನ್ನೇ ಹೇಳಿದ್ದೆ. ಅವರೇ ಅದನ್ನು ಕೇಳಿ ಆಶ್ಚರ್ಯಚಕಿತರಾಗಿದ್ದರು. ‘ಇನ್ನು ‘ಮಾರ್ಚ್ 22’ ಸಿನಿಮಾದ ಕಥೆ ಮಾಡಿಕೊಂಡಾಗಲೂ ವಿವಾದ ಆಗಬಹುದು ಎಂಬ ಕಾರಣಕ್ಕೆ ಅಡ್ವಾನ್ಸ್ ನೀಡಿದ್ದ ಕೆಲವು ನಿರ್ವಪಕರೂ ಹಿಂದೆ ಸರಿದಿದ್ದರು. ಕೊನೆಗೂ ಆ ಚಿತ್ರವನ್ನು ಮಾಡಿದೆ. ಯಾವಾಗಲೂ ಅಷ್ಟೇ, ಸುಲಭದಲ್ಲಿ ಆಗುವುದನ್ನು ಎಲ್ಲರೂ ಮಾಡುತ್ತಾರೆ. ಕಠಿಣವಾದದ್ದನ್ನು ಯಾರೂ ಮಾಡುವುದಿಲ್ಲ. ಹಾಗೆ ಯಾರೂ ಮಾಡಲು ಹಿಂಜರಿಯುವಂಥದ್ದನ್ನೇ ನಾನು ಹೆಚ್ಚು ಮಾಡುತ್ತೇನೆ’ ಎನ್ನುತ್ತಾರೆ ಕೋಡ್ಲು.

ಅದು ಕ್ಲಾಸ್, ಇದು ಮಾಸ್: ಇಂದಿನ ‘ಮತ್ತೆ ಉದ್ಭವ’ ಸಿನಿಮಾ ಅಂದಿನ ‘ಉದ್ಭವ’ ಸಿನಿಮಾದ ಸೀಕ್ವೆಲ್ ಆಗಿದ್ದರೂ ಅದಕ್ಕೂ ಇದಕ್ಕೂ ತುಂಬ ವ್ಯತ್ಯಾಸವಿದೆಯಂತೆ. ‘ಆ ಚಿತ್ರ ಕೆಲವೇ ವರ್ಗದವರಿಗಷ್ಟೇ ಇಷ್ಟವಾಗಿತ್ತು. ಆದರೆ ಈ ಸಿನಿಮಾ ಎಲ್ಲ ವರ್ಗದವರಿಗೂ ಇಷ್ಟವಾಗಲಿದೆ. ಆಟೋಚಾಲಕ, ಹೋಟೆಲ್ ಹುಡುಗ, ಕಾಲೇಜು ವಿದ್ಯಾರ್ಥಿಗಳಲ್ಲದೆ ಎಲ್ಲ ರೀತಿಯ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟವಾಗಲಿದೆ.

ಇಲ್ಲಿ ಸಸ್ಪೆನ್ಸ್, ಕಾಮಿಡಿ, ಲವ್ ಎಲ್ಲವೂ ಇದೆ. ಒಬ್ಬ ಪ್ರೇಕ್ಷಕ ಏನೆಲ್ಲ ಇರಬೇಕು ಎಂದುಕೊಂಡು ಬರುತ್ತಾನೋ ಅವೆಲ್ಲವೂ ಈ ಸಿನಿಮಾಲ್ಲಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆ ಉದ್ಭವ ಕ್ಲಾಸ್, ಈ ಉದ್ಭವ ಮಾಸ್’ ಎಂಬ ಅಭಿಪ್ರಾಯ ಕೋಡ್ಲು ಅವರದ್ದು. ಆದರೆ ಕ್ಲೈಮ್ಯಾಕ್ಸ್ ಮಾತ್ರ ಯಾರೂ ಊಹಿಸದ್ದೇ ಆಗಿರುತ್ತದಂತೆ. ‘ಈ ಚಿತ್ರದಲ್ಲಿ ಒಂದು ಅತ್ಯದ್ಭುತವಾದ ಕ್ಲೈಮ್ಯಾಕ್ಸ್ ಇದೆ. ಇದುವರೆಗೂ ಯಾರೂ ಮಾಡಿರದಂಥ ಕ್ಲೈಮ್ಯಾಕ್ಸ್ ಅದು. ಪ್ರೇಕ್ಷಕ ಅಂದುಕೊಂಡಿದ್ದು ಏನೂ ಆಗುವುದಿಲ್ಲ, ಅಂಥ ಕ್ಲೈಮ್ಯಾಕ್ಸ್ ಅದು’ ಎನ್ನುತ್ತಾರೆ ನಿರ್ದೇಶಕರು.

ಅದೆಷ್ಟೇ ನಿರೀಕ್ಷೆಯಿಂದ ಬಂದರೂ ಆಗದು ನಿರಾಶೆ

ಹಳೆಯ ಯಾವುದೇ ಯಶಸ್ವಿ ಸಿನಿಮಾಗಳ ಸೀಕ್ವೆಲ್ ಮಾಡುವಾಗ ಆ ಚಿತ್ರದ ಯಶಸ್ಸೇ ಪ್ರೇಕ್ಷಕರಲ್ಲಿ ಒಂದು ದೊಡ್ಡ ನಿರೀಕ್ಷೆ ಹುಟ್ಟಿಸಿಬಿಡುತ್ತದೆ. ಹಳೇ ಚಿತ್ರದ ಖ್ಯಾತಿಯೇ ಸೀಕ್ವೆಲ್ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿಬಿಡುತ್ತದೆ. ಹೀಗಾಗಿ ಸೀಕ್ವೆಲ್​ಗೆ ಅತಿಯಾದ ನಿರೀಕ್ಷೆ ಹಾಗೂ ಕುತೂಹಲದಿಂದ ಬರುವ ಪ್ರೇಕ್ಷಕರಲ್ಲಿ ಕೆಲವರಿಗೆ ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷಿತ ಮಟ್ಟಕ್ಕಿಲ್ಲ ಎಂದೆನಿಸಿ ನಿರಾಶೆ ಆಗುವ ಸಾಧ್ಯತೆ ಇರುತ್ತದೆ.

ಆದರೆ ಈ ಚಿತ್ರದ ಮಟ್ಟಿಗೆ ಹಾಗಾಗುವುದಿಲ್ಲ ಎಂಬ ಭರವಸೆ ನಿರ್ದೇಶಕರದು. ‘ಹಳೇ ಉದ್ಭವವನ್ನು ನೋಡಿದ ಶೇ. 30 ಮಂದಿ ಈ ಚಿತ್ರವನ್ನು ನೋಡಲು ಬಂದೇ ಬರುತ್ತಾರೆ. ಅವರಷ್ಟೇ ಅಲ್ಲದೆ, ಹೊಸಬರು ಸಹ ಅದೆಷ್ಟೇ ನಿರೀಕ್ಷೆ-ಕುತೂಹಲ ಇಟ್ಟುಕೊಂಡು ಬಂದರೂ ಖಂಡಿತ ನಿರಾಶೆ ಆಗುವುದಿಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೋಡ್ಲು ರಾಮಕೃಷ್ಣ.

ಅದು ಅಪ್ಪನ ಕಥೆ, ಇದು ಮಗನದ್ದು...

ಮೂಲ ‘ಉದ್ಭವ’ ಸಿನಿಮಾದಲ್ಲಿ ಅನಂತ್​ನಾಗ್ ನಾಯಕರಾಗಿ ನಟಿಸಿದ್ದರು. ಅಂದು ಅವರು ಮಾಡಿದ್ದ ಪಾತ್ರಕ್ಕೆ ಇಬ್ಬರು ಮಕ್ಕಳಿದ್ದರು. ಆ ಇಬ್ಬರು ಮಕ್ಕಳನ್ನೇ ಇಲ್ಲಿ ಮುಂದುವರಿಸಿ ಕಥೆ ಹೆಣೆಯಲಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳ ಶ್ರಮದಿಂದ ಕಥೆ ರಚಿಸಲಾಗಿದೆ. ಅದರಲ್ಲಿ ಒಬ್ಬ ಮಗನ ಎಂದರೆ ಕಥಾನಾಯಕನ ಪಾತ್ರವನ್ನು ಪ್ರಮೋದ್ ಮಾಡಿದ್ದು, ನಾಯಕಿಯಾಗಿ ಮಿಲನಾ ನಾಗರಾಜ್ ಅಭಿನಯಿಸಿದ್ದಾರೆ.

ಇನ್ನೊಬ್ಬ ಪುತ್ರನ ಪಾತ್ರದಲ್ಲಿ ಮಂಡ್ಯ ರವಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇಡೀ ಸಿನಿಮಾ ಹೀರೋ ಪಾತ್ರದ ಮೇಲೆ ನಿಂತಿದೆ, ಪ್ರಮೋದ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬ ಪ್ರಶಂಸೆ ವ್ಯಕ್ತಪಡಿಸುತ್ತಾರೆ ನಿರ್ದೇಶಕರು.

| ರವಿಕಾಂತ ಕುಂದಾಪುರ ಬೆಂಗಳೂರು  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net