ರಿಷಬ್ ವರ್ಸಸ್ ರಿತೇಶ್: ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಇಬ್ಬರು ನಟರ ಸಿನಿಮಾಗಳು ಘೋಷಣೆ

raja shivaji (1)
Published on

‘ಮರಾಠ ಸಾಮ್ರಾಜ್ಯದ ಅಧಿಪತಿ’ ಛತ್ರಪತಿ ಶಿವಾಜಿ ಮಹಾರಾಜರ ಕುರಿತಂತೆ ಹಲವು ಸಿನಿಮಾ ಹಾಗೂ ಧಾರಾವಾಹಿಗಳು ಬಂದಿವೆ ಹಾಗೂ ಬರುತ್ತಿವೆ. ಕೆಲ ತಿಂಗಳ ಹಿಂದಷ್ಟೇ ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ಮತ್ತು ನಟ ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್​ ಭಾರತ್’ ಚಿತ್ರ ಘೋಷಣೆಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಶಿವಾಜಿ ಮಹಾರಾಜರ ಕುರಿತ ಸಿನಿಮಾ ಅನೌನ್ಸ್ ಆಗಿದ್ದು, ಇದು ಕೂಡ ಕನ್ನಡ ಸೇರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ ಈ ಸಿನಿಮಾ ಮಾಡುತ್ತಿರುವುದು ಬಾಲಿವುಡ್ ನಟ ರಿತೇಶ್ ದೇಶ್​ಮುಖ್​. ಸ್ವತಃ ಅವರೇ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದು, ಜತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ‘ರಾಜಾ ಶಿವಾಜಿ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಟೈಟಲ್ ಅನೌನ್ಸ್ ಮಾಡಲಾಗಿದೆ. ಶಿವಾಜಿ ಮಹಾರಾಜರ ಜೀವನ, ಮರಾಠ ಸಾಮ್ರಾಜ್ಯ ಸ್ಥಾಪನೆ ಸೇರಿ ಮುಖ್ಯವಾಗಿ ಅವರ ಬೆಳವಣಿಗೆ ಕುರಿತು ಈ ಸಿನಿಮಾದಲ್ಲಿ ಬೆಳಕು ಚೆಲ್ಲುವ ಆಲೋಚನೆ ಚಿತ್ರತಂಡದ್ದು. ರಿತೇಶ್ ಜತೆಗೆ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಸಂಜಯ್ ದತ್, ಮಹೇಶ್ ಮಂಜ್ರೇಕರ್, ಸಚಿನ್ ಖೇಡ್ಕರ್, ಭಾಗ್ಯಶ್ರೀ, ಫರ್ಧಿನ್ ಖಾನ್, ಜಿತೇಂದ್ರ ಜೋಷಿ, ಜೆನಿಲಿಯಾ ದೇಶ್​ಮುಖ್. ಕಲಾ ಬಳಗದಲ್ಲಿದ್ದಾರೆ. ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿಬರಲಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, 2026ರ ಮೇ 1ಕ್ಕೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. -ಏಜೆನ್ಸೀಸ್

ಈ ಹಿಂದೆಯೂ ಹೀಗಾಗಿದೆ!: ಅಂದಹಾಗೆ ಒಬ್ಬರ ಬಗ್ಗೆ ಒಂದೇ ಸಮಯದಲ್ಲಿ ಎರಡು ಬಯೋಪಿಕ್‌ಗಳು ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಜಯ್ ದೇವ್ಗನ್ ನಟಿಸಿದ್ದ ‘ದ ಲೆಜೆಂಡ್ ಆಫ್​ ಭಗತ್ ಸಿಂಗ್’ ಮತ್ತು ಬಾಬಿ ಡಿಯೋಲ್, ಸನ್ನಿ ಡಿಯೋಲ್ ಸಹೋದರರು ಅಭಿನಯಿಸಿದ್ದ ‘ಶಹೀದ್; 23 ಮಾರ್ಚ್ 1931’ ಚಿತ್ರಗಳು 2002ರ ಜೂ. 7ರಂದು ಒಂದೇ ದಿನ ರಿಲೀಸ್ ಆಗಿದ್ದವು. ಹಾಗೇ ಇತ್ತೀಚೆಗಷ್ಟೆ ರಾಜಮೌಳಿ ಮತ್ತು ಜೂ. ಎನ್‌ಟಿಆರ್ ಹಾಗೂ ಆಮಿರ್ ಖಾನ್ ರಾಜಕುಮಾರ್ ಹಿರಾನಿ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಘೋಷಿಸಿದ್ದರು. ಇದೀಗ ಈ ಸಾಲಿಗೆ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ಕೂಡ ಸೇರಿದೆ. ರಿಷಬ್ ಶೆಟ್ಟಿ ಅಭಿನಯಿಸಲಿರುವ ‘ಛತ್ರಪತಿ ಶಿವಾಜಿ ಮಹಾರಾಜ್’ ಫೆ.19ರಂದು ಘೋಷಣೆಯಾಗಿತ್ತು. 2027ರ ಜನವರಿ 27ರಂದು ರಿಲೀಸ್ ಎಂದೂ ಘೋಷಿಸಲಾಗಿತ್ತು. ಅದರ ನಡುವೆಯೇ ರಿತೇಶ್ ದೇಶ್​ಮುಖ್​ ಕೂಡ ಸಿನಿಮಾ ಘೋಷಿಸಿದ್ದು, 2026ರ ಮೇ 1ರ ರಿಲೀಸ್ ಎಂದು ಅನೌನ್ಸ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net