

ಬೆಂಗಳೂರು: ಕನ್ನಡದಲ್ಲಿ ಇದುವರೆಗೂ ಅವಳಿ ಸಹೋದರರ ಕುರಿತಾದ ಹಲವು ಚಿತ್ರಗಳು ಬಂದಿವೆ. ಆ ಎಲ್ಲಾ ಚಿತ್ರಗಳಲ್ಲೂ ಒಬ್ಬರೇ ನಟ ಎರಡೂ ಪಾತ್ರಗಳನ್ನು ನಿಭಾಯಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದೇ ಮೊದಲ ಬಾರಿಗೆ ಅವಳಿ ಸಹೋದರರ ಕಥೆ ಇರುವ ಚಿತ್ರದಲ್ಲಿ ಅವಳಿ ಸಹೋದರರೇ ಪಾತ್ರ ಮಾಡಿದ್ದಾರೆ. ಅದೇ ‘ಬೈ 1 ಗೆಟ್ 1 ಫ್ರೀ’.
ಹೌದು, ನಿಜ ಜೀವನದಲ್ಲೂ ಅವಳಿ ಸಹೋದರರಾದ ಮಿಥುನ್ ಮತ್ತು ಮಿಲನ್, ಈ ‘ಬೈ 1 ಗೆಟ್ 1 ಫ್ರೀ’ ಚಿತ್ರದಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ ಮಿಥುನ್ ಮತ್ತು ಮಿಲನ್, ‘ಮೊಗ್ಗಿನ ಮನಸ್ಸು’ ಧಾರಾವಾಹಿಯಲ್ಲಿ ನಟಿಸಿದ್ದರಂತೆ. ಆ ನಂತರ ‘ಅಲ್ಲಮ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ಈಗ ಈ ನಿಜ ಜೀವನದ ಅವಳಿ ಸಹೋದರರು, ಸಿನಿಮಾದಲ್ಲೂ ಅವಳಿ ಸಹೋದರರಾಗಿಯೇ ಕಾಣಿಸಿಕೊಂಡಿರುವುದು ವಿಶೇಷ.
ಈ ಕುರಿತು ಮಾತನಾಡುವ ಮಿಥುನ್, ‘ಈ ಚಿತ್ರದಲ್ಲಿ ನಿಜವಾದ ಅವಳಿಗಳ ಮಧ್ಯೆ ಯಾವ ತರಹದ ಎಮೋಷನ್ಗಳಿರುತ್ತವೆ ಎಂದು ತೋರಿಸಲಾಗಿದೆ. ಇದೊಂದು ಬಯೋಪಿಕ್ ಚಿತ್ರವಲ್ಲ. ಆದರೆ, ನಮ್ಮ ಜೀವನದಲ್ಲಾದ ಹಲವು ಘಟನೆಗಳು ಈ ಚಿತ್ರದಲ್ಲಿವೆ. ಅವಳಿ ಸಹೋದರರು ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಾಮಿಡಿ ಅಂಶಗಳೂ ಇವೆ. ಇಲ್ಲಿ ಕಿಶೋರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕಿಶೋರ್ ಅವರು ರಫ್ ಆಂಡ್ ಟಫ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಇಲ್ಲಿ ಅವರದ್ದು ಕಾಮಿಡಿ ಪಾತ್ರ. ಆ ಪಾತ್ರದ ಹೆಸರು ಮನ್ಮಥ ಅಂತ. ಇಡೀ ಚಿತ್ರದ ಜೀವಾಳವೇ ಅವರು’ ಎನ್ನುತ್ತಾರೆ. ಈ ಚಿತ್ರ 2017ರ ಅಕ್ಟೋಬರ್ನಲ್ಲಿ ಶುರುವಾಗಿ, 2019ರ ಅಕ್ಟೋಬರ್ನಲ್ಲಿ ಮುಗಿಯಿತಂತೆ.
ಇದೀಗ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಲಾಕ್ಡೌನ್ ಮುಗಿದ ನಂತರ ಚಿತ್ರ ಬಿಡುಗಡೆಯಾಗಲಿದೆ. ಮಿಥುನ್ ಮತ್ತು ಮಿಲನ್ಗೆ ನಾಯಕಿಯಾಗಿ ರಿಷಿತಾ ಮಲ್ನಾಡ್ ನಟಿಸಿದ್ದು, ಮಿಕ್ಕಂತೆ ರೋಶನಿ ತೇಳ್ಕರ್, ಬಲ ರಾಜವಾಡಿ ಮುಂತಾದವರು ನಟಿಸಿದ್ದಾರೆ. ‘ಬೈ ಒನ್ ಗೆಟ್ ಒನ್ ಫ್ರೀ’ ಚಿತ್ರದ ನಿರ್ದೇಶನ ಮಾಡಿರುವುದು ಹರೀಶ್ ಅನಿಲ್ಗೋಡ್. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.