

ಬೆಂಗಳೂರು: ‘ಬಿಗ್‌ಬಾಸ್ ಕನ್ನಡ-ಸೀಸನ್ 4’ ಸೇರಿ ಕನ್ನಡದ ಕೆಲ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಸುನಾಮಿ ಕಿಟ್ಟಿ ‘ಕೋರ’ ಮೂಲಕ ನಾಯಕ ನಟನಾಗುತ್ತಿದ್ದಾರೆ. ‘ಒರಟ’ ಖ್ಯಾತಿಯ ಶ್ರೀ ನಿರ್ದೇಶನದ ಈ ಚಿತ್ರವು ಕಾಡಿನಲ್ಲಿರುವ ಕರಿಘಟ್ಟ ಎಂಬ ಊರಿನ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಕಿಟ್ಟಿಗೆ ನಟಿ ಚರಿಷ್ಮಾ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ೆ.7ರಂದು ಪ್ಯಾನ್ ಇಂಡಿಯಾ ರೂಪದಲ್ಲಿ ಸಿನಿಮಾ ತೆರೆ ಕಾಣಲಿದೆ. ಇತ್ತೀಚೆಗಷ್ಟೆ ಮಹರ್ಷಿ ಆನಂದ್ ಗುರೂಜಿ, ನಿರ್ದೇಶಕರಾದ ಆರ್.ಚಂದ್ರು, ‘ಬಹುದ್ದೂರ್’ ಚೇತನ್ ಕುಮಾರ್ ‘ಕೋರ’ ಟ್ರೇಲರ್ ರಿಲೀಸ್ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಅಧ್ಯಕ್ಷ ಉಮೇಶ್ ಬಣಕಾರ್, ನಟ ಕಾಕ್ರೋಜ್ ಸುಧೀ, ಒರಟ ಪ್ರಶಾಂತ್, ನಿರ್ಮಾಪಕ ಸಂಜಯ್ ಗೌಡ, ತುಕಾಲಿ ಸಂತೋಷ್ ಚಿತ್ರತಂಡಕ್ಕೆ ಶುಭಹಾರೈಸಿದರು. ಟ್ರೇಲರ್‌ನಲ್ಲಿ ಆ್ಯಕ್ಷನ್ ಅಂಶಗಳೇ ಹೆಚ್ಚಿದ್ದು, ಕಾಡಿನ ರಕ್ಷಣೆಗೆ ‘ಕೋರ’ ಪಣ ತೊಟ್ಟಿದ್ದಾನೆ. ನಿರ್ದೇಶಕ ಶ್ರೀ, ‘‘ಕೋರ’ 40 ವರ್ಷಗಳ ಹಿಂದಿನ ಕಥೆ. ಆ ಪ್ರದೇಶದಲ್ಲಿ ಪ್ರಕೃತಿಯನ್ನು ದೇವರ ತರಹ ಆರಾಧಿಸುತ್ತಿದ್ದರು. ಆಗ ಒಂದು ಅಡಿ ಜಾಗಕ್ಕೂ ಹೊಡೆದಾಟ ಆಗುತ್ತಿದ್ದವು. ಈ ರೀತಿಯ ವಿಭಿನ್ನ ಕಂಟೆಂಟ್ ಹೊಂದಿರುವ ಕಮರ್ಷಿಯಲ್ ಚಿತ್ರವಿದು. ಇದು ಎಲ್ಲ ಭಾಷೆಗೆ ಹೊಂದುವ ಕಥೆಯಾಗಿದೆ. ಹಾಗಾಗಿ ಪ್ಯಾನ್ ಇಂಡಿಯಾ ರಿಲೀಸ್ ಮಾಡಲು ಮುಂದಾದೆವು’ ಎಂದರು. ಎಂ.ಕೆ.ಮಠ, ಮುನಿ, ನೀನಾಸಂ ಅಶ್ವತ್ಥ್, ಯತಿರಾಜು, ಸೌಜನ್ಯ ಕಲಾ ಬಳಗದಲ್ಲಿದ್ದಾರೆ.