ಮತ್ತೊಂದು ವಿಚಾರದಿಂದ ತಮಿಳು ನಟಿ ತ್ರಿಷಾ ಕೃಷ್ಣನ್ ಮುನ್ನೆಲೆಗೆ
ಕರುಪ್ಪು ಚಿತ್ರದ ಆಡಿಯೋ ಲಾಂಚ್ಗೆ ಬರಲಿಲ್ಲ ಸ್ಟಾರ್ ಹೀರೋಯಿನ್
ಚಿತ್ರತಂಡದೊಂದಿಗೆ ಮನಸ್ತಾಪವೇ ಇದಕ್ಕೆ ಕಾರಣ?
ಚೆನ್ನೈ: ಮೊದಲೇ ತಮಿಳು ನಟ ವಿಜಯ್ ಜೊತೆಗಿನ ಸಂಬಂಧದ ಕುರಿತು ಸಾಕಷ್ಟು ಊಹಾಪೋಹಗಳಿಗೆ ಗುರಿಯಾಗಿರುವ ಬಹುಭಾಷಾ ನಟಿ ತ್ರಿಷಾ ಕೃಷ್ಣನ್, ಇದೀಗ ತಮ್ಮ ಮುಂಬರುವ ಬಹುನಿರೀಕ್ಷಿತ 'ಕರುಪ್ಪು' ಚಿತ್ರದ ಆಡಿಯೋ ಲಾಂಚ್ಗೆ ಗೈರಾಗಿರುವುದು ಸದ್ಯ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
ಆರ್‌ಜೆ ಬಾಲಾಜಿ ನಿರ್ದೇಶನದ ಮತ್ತು ತಮಿಳಿನ ಸೂಪರ್ ಹೀರೋ ಸೂರ್ಯ ಹಾಗೂ ತ್ರಿಷಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಕರುಪ್ಪು' ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ರಿಲೀಸ್ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವ ಚಿತ್ರತಂಡ, ಇತ್ತೀಚೆಗಷ್ಟೇ ಅದ್ಧೂರಿಯಾಗಿ ಆಡಿಯೋ ಲಾಂಚ್ ಆಯೋಜಿಸಿತ್ತು. ಆದರೆ, ಈ ವೇದಿಕೆಗೆ ಸಿನಿಮಾದ ಬ್ಯೂಟಿಯೇ ಹಾಜರಾಗದೆ ಇದ್ದದ್ದು ಸಿನಿಪ್ರಿಯರ ಗೊಂದಲಕ್ಕೆ ಕಾರಣವಾಗಿದೆ.
ಬಿಡುಗಡೆಗೂ ಮುನ್ನ ಚೆನ್ನೈನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತ್ರಿಷಾ ಭಾಗವಹಿಸಿರಲಿಲ್ಲ. ಇದರ ಬೆನ್ನಲ್ಲೇ ನಟಿ ಸಾಕಷ್ಟು ಟೀಕೆಗೆ ಗುರಿಯಾದರು. ಇದು ನಾಯಕಿ ಮತ್ತು ಚಿತ್ರತಂಡದ ನಡುವೆ ಏನೋ ಒಂದು ಮನಸ್ತಾಪ ಭುಗಿಲೆದ್ದಿರಬಹುದು. ಯಾವುದೂ ಸರಿಯಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ, ಸ್ವತಃ ನಟಿ ಮಾಡಿರುವ ಪೋಸ್ಟ್ ಕೂಡ ಇಂತಹ ವದಂತಿಗಳಿಗೆ ಪರೋಕ್ಷವಾಗಿ ಪುಷ್ಠಿ ನೀಡಿದೆ.
20 ವರ್ಷಗಳ ಬಳಿಕ 'ಕರುಪ್ಪು' ಮೂಲಕ ಸೂರ್ಯ ಮತ್ತು ತ್ರಿಷಾ ಬೆಳ್ಳಿತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿರುವುದು ತಮಿಳು ಸಿನಿಪ್ರಿಯರು ಮತ್ತು ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಚಿತ್ರದಲ್ಲಿ ತ್ರಿಷಾ 'ಪ್ರೀತಿ' ಎಂಬ ವಕೀಲೆಯ ಪಾತ್ರವನ್ನು ನಿರ್ವಹಿಸಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಟೀಸರ್ನಲ್ಲಿ ಅವರ ಪಾತ್ರ ನೋಡುಗರ ಕುತೂಹಲವನ್ನು ಕೆರಳಿಸಿದೆ. ಹೀಗಿರುವಾಗಲೇ, ತನ್ನನ್ನು ಚಿತ್ರತಂಡ ಆಡಿಯೋ ಲಾಂಚ್ಗೆ ಕರೆಯುವ ವಿಚಾರದಲ್ಲಿ ನಿರ್ಲಕ್ಷಿಸಿದೆ ಎಂದು ತ್ರಿಷಾ ತಮ್ಮ ಪೋಸ್ಟ್ ಮೂಲಕ ಪರೋಕ್ಷವಾಗಿ ಹೇಳಿರುವುದು ಕಂಡುಬಂದಿದೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನೀವೆಲ್ಲಿ ಕಾಣಿಸಲಿಲ್ಲ? ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ, "ನನ್ನ ಆಹ್ವಾನ ಎಲ್ಲೋ ಮೇಲ್‌ನಲ್ಲಿ ಕಳೆದುಹೋಗಿದೆ" ಎಂದು ಕಮೆಂಟ್ ಮಾಡಿರುವುದು ಕೆಲವರ ಊಹಾಪೋಹಗಳಿಗೆ ಕಾರಣವಾಗಿದೆ. ಇದೇ ಮೇ.14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಎದುರುನೋಡುತ್ತಿರುವ 'ಕರುಪ್ಪು' ತಮಿಳಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಈ ಚಿತ್ರವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸೂರ್ಯ, ತ್ರಿಷಾ ಕೃಷ್ಣನ್, ಇಂದ್ರನ್ಸ್, ಸ್ವಿಸಿಕಾ, ಅನಘ ಮಾಯಾ ರವಿ, ಸುಪ್ರೀತ್ ರೆಡ್ಡಿ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).