

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ‘ದ್ವಿತ್ವ’ ಸಿನಿಮಾ ಘೋಷಣೆ ಆದ ಬಳಿಕ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿ, ಇದೀಗ ಸದ್ದಿಲ್ಲದೆ ಈ ಚಿತ್ರಕ್ಕೆ ನಾಯಕಿ ಆಯ್ಕೆಯೂ ಅಂತಿಮವಾಗಿದ್ದು, ಸೌತ್ ಸುಂದರಿ ತ್ರಿಷಾ ಕೃಷ್ಣನ್ ಮತ್ತೆ ಸ್ಯಾಂಡಲ್ವುಡ್ಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.
2014ರಲ್ಲಿ ಪುನೀತ್ ನಟನೆಯ ‘ಪವರ್’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ತ್ರಿಷಾ, ಅದಾದ ಬಳಿಕ ಬೇರಾವ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸುದೀರ್ಘ ಏಳು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರಂತೆ. ಕಥೆ ಕೇಳಿ ಥ್ರಿಲ್ ಆಗಿರುವ ಅವರು, ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.
‘ದ್ವಿತ್ವ’ ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ಚಿತ್ರ. ತಮ್ಮ ಸಿನಿಮಾ ಜರ್ನಿಯಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಪುನೀತ್ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸ್ವತಃ ನಿರ್ದೇಶಕರು ಮತ್ತು ಪುನೀತ್ ಸಹ ಹೇಳಿಕೊಂಡಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆ ಶುರುವಾಗಿದ್ದು, ಸೆಪ್ಟೆಂಬರ್ ವೇಳೆಗೆ ಶೂಟಿಂಗ್ ಶುರುವಾಗಲಿದೆ. ಇತ್ತ ‘ಜೇಮ್ಸ್’ ಚಿತ್ರದ ಚಿತ್ರೀಕರಣದಲ್ಲಿ ಪುನೀತ್ ಭಾಗವಹಿಸಿದರೆ, ತಮಿಳಿನ ನಾಲ್ಕು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ.