ಮೆಗಾ ಆಫರ್ ಕೈಬಿಟ್ಟ ತ್ರಿಷಾ!

thisa 15 mar 20
Published on

2006ರಲ್ಲಿ ತೆರೆಕಂಡ ‘ಸ್ಟಾಲಿನ್’ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಅದಾದ ಸುದೀರ್ಘ 14 ವರ್ಷಗಳ ಬಳಿಕ ‘ಆಚಾರ್ಯ’ ಸಿನಿಮಾ ಮೂಲಕ ಈ ಜೋಡಿ ಮತ್ತೆ ಒಂದಾಗಲಿದೆ ಎಂದಾಗ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು.

ಈಗ ಆ ಚಿತ್ರದಿಂದ ತ್ರಿಷಾ ಹೊರನಡೆದಿದ್ದಾರೆ! ಅದಕ್ಕೆ ಸಿನಿಮಾದಲ್ಲಾದ ಹಲವು ಬದಲಾವಣೆಗಳೇ ಕಾರಣವಂತೆ. ಅದನ್ನು ಸ್ವತಃ ತ್ರಿಷಾ ಹೇಳಿಕೊಂಡಿದ್ದಾರೆ. ‘ಕೆಲವೊಂದಿಷ್ಟು ಸಲ ಹಲವು ವಿಚಾರಗಳು ಬದಲಾಗುತ್ತವೆ. ಈ ಹಿಂದೆ ಹೇಳಿದ್ದಕ್ಕೂ ರ್ಚಚಿಸಿದ್ದಕ್ಕೂ ಏರಿಳಿತಗಳು ಕಂಡುಬರುತ್ತವೆ. ಹಾಗಾಗಿ ಕೆಲವು ತಾಂತ್ರಿಕ ಕಾರಣಗಳಿಂದ ಚಿರಂಜೀವಿ ಅವರ ಸಿನಿಮಾದಿಂದ ಹಿಂದೆ ಸರಿಯಬೇಕಾಯಿತು. ಇಡೀ ತಂಡಕ್ಕೆ ಶುಭವಾಗಲಿ. ನನ್ನ ನೆಚ್ಚಿನ ಅಭಿಮಾನಿಗಳೇ.. ಶೀಘ್ರ ಅಚ್ಚರಿ ರೀತಿಯ ಸುದ್ದಿಯೊಂದಿಗೆ ಆಗಮಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ, ಸ್ಕ್ರಿಪ್ಟ್ ವಿಚಾರದಲ್ಲಿ ಬದಲಾಗಿದೆಯೇ? ದ್ವಿಪಾತ್ರ ಎಂಬ ಕಾರಣಕ್ಕೆ ಪಾತ್ರವನ್ನೇನಾದರೂ ತಿರುಚಲಾಗಿದೆಯೇ ? ಸದ್ಯಕ್ಕೆ ಆ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ತ್ರಿಷಾ ಕೆಲವೊಂದಿಷ್ಟು ಕಾರಣಗಳನ್ನು ನೀಡಿ ಹೊರಬಂದಿದ್ದಾರೆ. ಈ ಹಿಂ

ದೆ ವಿಕ್ರಂ ನಾಯಕತ್ವದ ‘ಸ್ಯಾಮಿ ಸ್ಕೆ್ವೕರ್’ ಚಿತ್ರದಿಂದಲೂ ತ್ರಿಷಾ ಹೊರಬಂದಿದ್ದರು. ಇಷ್ಟೆಲ್ಲ ಬದಲಾವಣೆ ಆಗುತ್ತಿದ್ದಂತೆ ತ್ರಿಷಾ ನಿಭಾಯಿಸಬೇಕಿದ್ದ ಪಾತ್ರವನ್ನು ಬೇರೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ಹಿಂದೆ ‘ಕೈದಿ ನಂ 150’ ಸಿನಿಮಾದಲ್ಲಿ ಚಿರುಗೆ ಜೋಡಿಯಾಗಿದ್ದ ಕಾಜಲ್ ಅಗರ್​ವಾಲ್ ತ್ರಿಷಾ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ‘ಆಚಾರ್ಯ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದು, ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ನಕ್ಸಲೈಟ್ ಒಬ್ಬ ಬದಲಾಗಿ ಹೇಗೆ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಕಥೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net