

ಈ ಹಿಂದೆ ‘143’ ಎಂಬ ಚಿತ್ರ ನಿರ್ದೇಶಿಸಿದ್ದ ಚಂದ್ರಕಾಂತ್, ಈಗ ‘ತ್ರಿಕೋನ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ಏಪ್ರಿಲ್ನಲ್ಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಲಾಕ್ಡೌನ್ನಿಂದ ತಡವಾದ ಚಿತ್ರ, ಈಗ ಈ ಏಪ್ರಿಲ್ನಲ್ಲಿ ತೆರೆಗೆ ಬರುತ್ತಿದೆ. ಈ ಮಧ್ಯೆ, ಗುರುವಾರ ಸಂಜೆ ಯೂಟ್ಯೂಬ್ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದಕ್ಕೂ ಮುಂಚೆ ‘ಪೆರೋಲ್’, ‘ಬರ್ಫಿ’ ಮತ್ತು ‘ಅಮೃತವಾಣಿ’ ಚಿತ್ರಗಳನ್ನು ನಿರ್ವಿುಸಿದ್ದ ರಾಜಶೇಖರ್ ಈ ಚಿತ್ರ ನಿರ್ವಿುಸಿದ್ದು, ಕಥೆಯನ್ನು ಅವರೇ ಬರೆದಿದ್ದಾರೆ. ವಿಶೇಷವೆಂದರೆ, ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಿದ್ದು, ಕಥೆ ಒಂದೇ ಆದರೂ, ಆ ಭಾಷೆಗಳ ನೇಟಿವಿಟಿ ಮತ್ತು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಮೂರು ವಿಭಿನ್ನ ಚಿತ್ರಕಥೆಗಳನ್ನಯ ಹೆಣೆಯಲಾಗಿದೆ.
ಚಿತ್ರದ ಕುರಿತು ಮಾತನಾಡುವ ಚಂದ್ರಕಾಂತ್, ‘ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳುತ್ತಿದ್ದೇವೆ. ಒಂದು ಘಟನೆಯನ್ನು ಈ ಮೂರು ತಲಮಾರಿನವರು ಹೇಗೆ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆ, ಅಹಂ ಮತ್ತು ಶಕ್ತಿಯಿಂದ ಎದುರಿಸಿದಾಗ ಏನೆಲ್ಲ ಆಗುತ್ತದೆ ಎಂದು ಹೇಳುವ ಪ್ರಯತ್ನ ಇದು’ ಎನ್ನುತ್ತಾರೆ ಚಂದ್ರಕಾಂತ್.
ಈ ಚಿತ್ರದಲ್ಲಿ ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ರಾಜವೀರ್, ಮಾರುತೇಶ್ ಮುಂತಾದವರು ನಟಿಸಿದ್ದಾರೆ. ಸಾಧು ಕೋಕಿಲ ಒಂದು ವಿಶೇಷ ಪಾತ್ರದಲ್ಲಿ ನಗಿಸಲಿದ್ದಾರೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ಸಂಯೋಜಿಸಿದರೆ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಮಾಡುತ್ತಿದ್ದಾರೆ. ಈಗಾಗಲೇ ಮೂರು ಭಾಷೆಗಳ ‘ತ್ರಿಕೋನ’ ಸೆನ್ಸಾರ್ ಆಗಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ.