

ಮುಂಬೈ: ದೇಶದಲ್ಲಿ ಕರೊನಾ ಎರಡನೇ ಅಲೆ ಹೆಚ್ಚಾದಂತೆ, ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲ ಮುಂದೂಡಲ್ಪಟ್ಟಿವೆ. ಇಂಥ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ‘ಚಿತ್ರಮಂದಿರಗಳ ಆಸೆ ಬಿಟ್ಟು, ಓಟಿಟಿಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದವು. ಅಂತಹ ತಂಡಗಳ ಪೈಕಿ, ಫರ್ಹಾನ್ ಅಖ್ತರ್ ಅಭಿನಯದ 'ತೂಫಾನ್' ಚಿತ್ರತಂಡವೂ ಒಂದು.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ 21ರಂದು 'ತೂಫಾನ್' ಚಿತ್ರವು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಬೇಕಿತ್ತು. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿವೆ ಎನ್ನುವಷ್ಟರಲ್ಲಿ ಚಿತ್ರತಂಡದವರು ಬಿಡುಗಡೆಯನ್ನು ಮುಂದೂಡಿದ್ದರು. ದೇಶದಲ್ಲಿ ಕರೊನಾ ಕೇಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತ ಚಾಚುವುದು ತಮ್ಮ ಮುಖ್ಯ ಉದ್ದೇಶವಾಗಿರುವುದರಿಂದ `ತೂಫಾನ್’ ಚಿತ್ರವನ್ನು ಮುಂದೂಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಚಿತ್ರತಂಡದವರು ಘೋಷಿಸಿದ್ದರು.
ಹೀಗೆ ಮುಂದಕ್ಕೆ ಹೋದ ಚಿತ್ರದ ಬಿಡುಗಡೆ, ಇದೀಗ ಕೊನೆಗೂ ಫಿಕ್ಸ್ ಆಗಿದೆ. ಜುಲೈ 16ರಂದು ಅಮೇಜಾನ್ ಪ್ರೈಮ್ನಲ್ಲೇ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಕುರಿತು ಚಿತ್ರತಂಡದವರೇ ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ.
`ತೂಫಾನ್’ ಚಿತ್ರದಲ್ಲಿ ಫರ್ಹಾನ್, ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಪರೇಶ್ ರಾವಲ್, ಮೃಣಾಲ್ ಠಾಕೂರ್, ವಿಜಯ್ ರಾಜ್, ಮೋಹನ್ ಅಗಾಸ್ಸೆ ಮುಂತಾದವರು ನಟಿಸಿದ್ದಾರೆ. ಈ ಹಿಂದೆ `ಭಾಗ್ ಮಿಲ್ಕಾ ಭಾಗ್’, `ದಿಲ್ಲಿ ೬’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.