

ಸಿನಿಮಾ: ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹಾಗೂ ಶ್ರೀಕಾಂತ್ ಒಡೆಲಾ ನಿರ್ದೇಶಿಸಿರುವ 'ದಿ ಪ್ಯಾರಡೈಸ್' ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಆದರೆ ಈ ಸಿನಿಮಾ ಬಿಡುಗಡೆಯೆ ಮೊದಲಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾ ಸೋತಿದೆ ಎನ್ನುವುದು ವಿಮರ್ಶಕರ ಅಭಿಪ್ರಾಯವಾಗಿದೆ.
ಈಗ, ಸಿನಿಮಾ ಬಗ್ಗೆ ಕೇಳಿಬರುತ್ತಿರುವ ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್‌ಗಳ ಕುರಿತು ಸ್ವತಃ ನಟ ನಾನಿ, ಮುಕ್ತ ಮನಸ್ಸಿನಿಂದ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸುವ ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕಾಮಿಡಿ ಟ್ರೋಲ್‌ಗಳನ್ನೂ ತಾವು ಸಂತೋಷದಿಂದಲೇ ಸ್ವೀಕರಿಸಿದ್ದಾಗಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಸಂದೇಶವೊಂದನ್ನು ಹಂಚಿಕೊಂಡಿರುವ ನಾನಿ, ಸಿನಿಮಾವನ್ನು ತಮ್ಮ ಸ್ವಂತ ಚಿತ್ರದಂತೆ ಅಪ್ಪಿಕೊಂಡಿರುವ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನು ನಾನು ನೋಡಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇನೆ ಮತ್ತು ಅದೇ ಸಮಯದಲ್ಲಿ ಕೆಲ ಹಾಸ್ಯಭರಿತ ಟ್ರೋಲ್‌ಗಳನ್ನು ಕೂಡ ನಾನು ಆನಂದಿಸಿದ್ದೇನೆ. ಪ್ರೇಕ್ಷಕರು ಈ ಸಿನಿಮಾವನ್ನು ತಮ್ಮದೆಂದು ಭಾವಿಸಿ ಸ್ವೀಕರಿಸಿದ ರೀತಿ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ನಾನಿ ಬರೆದುಕೊಂಡಿದ್ದಾರೆ.
ಕೇವಲ ಪ್ರಶಂಸೆಗಳನ್ನು ಮಾತ್ರವಲ್ಲದೆ, ವಿಮರ್ಶಕರು ಎತ್ತಿ ತೋರಿಸಿರುವ ಲೋಪದೋಷಗಳು ಹಾಗೂ ನೆಗೆಟಿವ್ ರಿವ್ಯೂಗಳನ್ನೂ ನಾನಿ ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಚಿತ್ರದಲ್ಲಿ ಇರುವ ಮೈನಸ್‌ಗಳಿಂದ ತಾವು ಮುಂದಿನ ದಿನಗಳಿಗೆ ಪಾಠ ಕಲಿತುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ವಿಮರ್ಶಕರು ಎತ್ತಿ ತೋರಿಸಿದ ಲೋಪದೋಷಗಳಿಂದಲೂ ನಾನು ಸಾಕಷ್ಟು ಕಲಿತಿದ್ದೇನೆ. ಎಲ್ಲದಕ್ಕೂ ಧನ್ಯವಾದಗಳು, ಇದಷ್ಟೇ ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ, ಎಂದು ನಾನಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ನಂತರ ಹೊರಬಂದಿರುವ ವಿಮರ್ಶೆಗಳಲ್ಲಿ ಚಿತ್ರದ ಕಥೆ ಹಾಗೂ ಹಿಂಸಾತ್ಮಕ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸಿನಿಮಾದ ಫಸ್ಟ್ ಹಾಫ್ ಭರವಸೆ ಮೂಡಿಸಿದರೂ, ದ್ವಿತೀಯಾರ್ಧ ಪ್ರೇಕ್ಷಕರ ಮನವನ್ನು ತಲುಪುವುದರಲ್ಲಿ ವಿಫಲವಾಗಿದೆ ಎನ್ನುವುದು ಬಹತೇಕ ವಿಮರ್ಶಕರ ಅಭಿಪ್ರಾಯವಾಗಿದೆ.
ಆದರೆ, ನಾನಿ ತಮ್ಮ ಪಾತ್ರದಲ್ಲಿ ಉತ್ತಮವಾಗಿ ಕಂಡುಬಂದರೂ ಇತರೆ ಪಾತ್ರಗಳ ವೀಕ್ ಆಗಿದ್ದವು ಎನ್ನಲಾಗುತ್ತಿದೆ. ಇಷ್ಟೆಲ್ಲಾ ಟ್ರೋಲ್ ಹಾಗೂ ನೂನ್ಯತೆಯ ನಂತರವೂ ಭಾರತದಲ್ಲಿ ಸುಮಾರು 54 ಕೋಟಿ ಹಾಗೂ ವಿದೇಶದಲ್ಲಿ 22 ಕೋಟಿಗಳಿಸುವ ಮೂಲಕ ಮೊದಲ ದಿನ ಸುಮಾರು 76 ಕೋಟಿ ಗಳಿಕೆ ಮಾಡಿದೆ, (ಏಜೆನ್ಸೀಸ್).