ನಟ ರಾಮಚರಣ್ ತೇಜ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’. ಟೀಸರ್, ಪೋಸ್ಟರ್ ಮೂಲಕ ಸಿನಿಮಾ ಈಗಾಗಲೇ ಎಲ್ಲರ ಗಮನಸೆಳೆದಿದೆ. ಇನ್ನು ‘ಆಚಾರ್ಯ’, ‘ಗೇಮ್ ಚೇಂಜರ್’ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದ ಕಾರಣ, ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಮೇಲೆ ರಾಮಚರಣ್ ಅಭಿಮಾನಿಗಳು ಹೆಚ್ಚು ನಿರೀಕ್ಷೆಯಿಟ್ಟಿದ್ದಾರೆ. ಆದರೆ, ಚಿತ್ರದ ರಿಲೀಸ್‌ಗೆ ಕಾಲ ಕೂಡಿ ಬಂದಂತೆ ಕಾಣುತ್ತಿಲ್ಲ. ಈ ಮೊದಲು ಚಿತ್ರತಂಡ ಮಾ. 26ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ. ‘ಧುರಂಧರ್ 2’ ಸೃಷ್ಟಿಸಿದ ಕ್ರೇಜ್ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸ ತಡವಾದ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಿ, ಏ. 30ಕ್ಕೆ ಘೋಷಿಸಿತ್ತು. ಈ ಮಧ್ಯೆ ಏ.30ಕ್ಕೂ ‘ಪೆದ್ದಿ’ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿತ್ತು. ಇದೀಗ ಈ ಸುದ್ದಿ ಖಚಿತವಾಗಿದ್ದು, ಎರಡನೇ ಬಾರಿಗೆ ಸಿನಿಮಾ ರಿಲೀಸ್ ಡೇಟ್ ಮುಂದೂಡಿರುವ ಚಿತ್ರತಂಡ ಜೂನ್‌ಗೆ ಪಕ್ಕಾ ಬರಲಿದ್ದೇವೆ ಎಂದು ಘೋಷಿಸಿದೆ. ‘‘ಪೆದ್ದಿ’ ಚಿತ್ರದ ಸಾಂಗ್, ಗ್ಲಿಂಪ್ಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಈಗಾಗಲೇ ಮಾತಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಒಂದು ಸಾಂಗ್ ಮಾತ್ರ ಬಾಕಿಯಿದೆ. ಇಡೀ ಚಿತ್ರದ ಔಟ್‌ಪುಟ್ ಬಗ್ಗೆ ನಮಗೆ ಭರವಸೆಯಿದ್ದು, ಸದ್ಯ ಸಿನಿಮಾ ಪೋಸ್ಟ್ -ಪ್ರೊಡಕ್ಷನ್ ಹಂತದಲ್ಲಿದೆ. ಕೈಯಲ್ಲಿ ಒಳ್ಳೆಯ ಕಂಟೆಂಟ್ ಇರುವಾಗ ಅದನ್ನು ಸರಿಯಾಗಿ ತಲುಪಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ತಾಂತ್ರಿಕ ಕೆಲಸಕ್ಕೆ ಮತ್ತು ಪೋಸ್ಟ್ -ಪ್ರೊಡಕ್ಷನ್ ಇನ್ನಷ್ಟು ಉತ್ತಮವಾಗಲೆಂದು ಹೆಚ್ಚುವರಿ ಸಮಯವನ್ನು ಮೀಸಲಾಗಿರಿಸುತ್ತಿದ್ದೇವೆ. ಅದಕ್ಕಾಗಿ ಸಿನಿಮಾ ರಿಲೀಸ್ ದಿನಾಂಕವನ್ನು ಜೂನ್‌ಗೆ ಮುಂದೂಡುತ್ತಿದ್ದು, ಹೊಸ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಿದ್ದೇವೆ. ಪ್ರೇಕ್ಷಕರಿಗೆ ಉತ್ತಮ ಥಿಯೇಟರ್ ಅನುಭವ ಸಿಗಲಿ ಎಂಬುದೇ ನಮ್ಮ ಉದ್ದೇಶ’ ಎಂದು ಚಿತ್ರತಂಡ ತಿಳಿಸಿದೆ. ‘ಉಪ್ಪೇನಾ’ ಖ್ಯಾತಿಯ ಬುಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ಯಲ್ಲಿ ರಾಮ್‌ಗೆ ಜಾಹ್ನವಿ ಕಪೂರ್ ಜೋಡಿಯಾಗಿದ್ದು, ಶಿವರಾಜಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್