'ಸ್ಪಿರಿಟ್'​ನಿಂದ ಗೇಟ್​ಪಾಸ್! ಸುಳ್ಳು ಸುದ್ದಿ ಹರಡುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಪ್ರಕಾಶ್ ರಾಜ್​

ನಟ ಪ್ರಕಾಶ್ ರಾಜ್​
ನಟ ಪ್ರಕಾಶ್ ರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದ ಶೂಟಿಂಗ್ ಆರಂಭ
  • ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ನಟನೆ
  • ಪ್ರಮುಖ ಪಾತ್ರದಲ್ಲಿ ನಟಿಸಬೇಕಿದ್ದ ಪ್ರಕಾಶ್ ರಾಜ್ ದಿಢೀರ್ ಎಕ್ಸಿಟ್​?
  • ಕಡೆಗೂ ವದಂತಿ ಕುರಿತು ಮೌನ ಮುರಿದ ಹಿರಿಯ ನಟ
ಬೆಂಗಳೂರು: ಟಾಲಿವುಡ್​ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್' ಚಿತ್ರದ ಮೇಲೆ ಸಿನಿಪ್ರಿಯರ ಕಣ್ಣು ಬಿದ್ದಿದ್ದು, ಸಿನಿಮಾ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಈ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ. ಇದರ ಬೆನ್ನಲ್ಲೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಹುಭಾಷಾ ನಟ ಪ್ರಕಾಶ್​ ರಾಜ್​ಗೆ (Prakash Raj) ದಿಢೀರ್ ಗೇಟ್​ಪಾಸ್​ ಕೊಡಲಾಗಿದೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಬೇರೆ ಬೇರೆ ತಿರುವು ಪಡೆಯುತ್ತಿದ್ದ ವಿಚಾರಕ್ಕೆ ಕಡೆಗೂ ಪ್ರತಿಕ್ರಿಯಿಸುವ ಮೂಲಕ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.​
ಅನಿಮಲ್ ಚಿತ್ರದಲ್ಲಿ ತಮ್ಮ ಬೋಲ್ಡ್​ ದೃಶ್ಯಗಳಿಂದಲೇ ಸದ್ದು ಮಾಡಿದ ತೃಪ್ತಿ ದಿಮ್ರಿ ಮತ್ತು ಪ್ರಭಾಸ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸ್ಪಿರಿಟ್​ನಿಂದ ಇದೀಗ ಪ್ರಕಾಶ್ ರಾಜ್​ ಹೊರನಡೆದಿದ್ದಾರೆ ಎಂಬ ವದಂತಿಗಳು ತೀವ್ರ ಚರ್ಚೆಗೆ ಗ್ರಾಸವಾಯಿತು. ಅಂತದ್ದೇನು ಆಯಿತು? ಪ್ರಕಾಶ್ ರಾಜ್​ ಚಿತ್ರತಂಡದಿಂದ ಎಕ್ಸಿಟ್​ ಆಗಿದ್ದೇಕೆ? ನಿರ್ದೇಶಕ ಸಂದೀಪ್ ಮತ್ತು ರಾಜ್​ ಅವರ ನಡುವೆ ಮನಸ್ತಾಪ ಏನಾದರೂ ಉಂಟಾಯಿತಾ? ಎಂಬ ಪ್ರಶ್ನೆಗಳು ಹಲವರಲ್ಲಿ ಕಾಡತೊಡಗಿತು. ಈ ರೀತಿಯ ನಕಲಿ ಸುದ್ದಿಗಳು ಭಾರೀ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪ್ರಕಾಶ್​, ತಮ್ಮ ಒಂದು ಟ್ವೀಟ್​ ಮೂಲಕ ಇದಕ್ಕೆಲ್ಲ ತೆರೆ ಎಳೆದಿದ್ದಾರೆ.
ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಜ್, "ಸ್ಪಿರಿಟ್ ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಎಲ್ಲಾ ವಿಷಕಾರಿಗಳೇ, ನನ್ನ ಪಾತ್ರದ ಶೂಟಿಂಗ್​ ಇನ್ನೂ ಆರಂಭವೇ ಆಗಿಲ್ಲ. ಹೀಗಿರುವಾಗ, ತಮ್ಮ ಊಹೆಗೆ ಬಂದ ಸುದ್ದಿಗಳನ್ನು ವಾಟ್ಸ್​ಆ್ಯಪ್​ ಫ್ಯಾಕ್ಟರಿಗಳು ಹೊರಬಿಡುತ್ತಿವೆ. ಮೊದಲು ಬೆಳೆಯಿರಿ. ಜೀವನವನ್ನು ಕಟ್ಟಿಕೊಳ್ಳಿ" ಎಂದು ನಗುವ ಎಮೋಜಿಗಳ ಮೂಲಕ ಮುಖಕ್ಕೆ ಹೊಡೆದಂತೆ ಉತ್ತರಿಸಿದ್ದಾರೆ.
ಸಂದೀಪ್​ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್​ ಮತ್ತು ತ್ರಿಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ವಿವೇಕ್​ ಓಬಿರಾಯ್​, ಕಾಂಚಾನ, ಪ್ರಕಾಶ್ ರಾಜ್​ ಸೇರಿ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿರುವ ಸ್ಪಿರಿಟ್​, 2026ರಲ್ಲಿ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಎದುರುನೋಡುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net