ಸಿನಿಮಾ ತಂಡಗಳು ಎಷ್ಟೇ ಮುಂಜಾಗ್ರತೆ ವಹಿಸಿದರೂ ಚಿತ್ರೀಕರಣದ ವೇಳೆಯ ಫೋಟೋ, ವಿಡಿಯೋಗಳು ವೈರಲ್ ಆಗುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗಷ್ಟೇ ತೆಲುಗಿನ ಪ್ಯಾನ್ ವರ್ಲ್ಡ್ ಚಿತ್ರ ‘ವಾರಣಾಸಿ’ ಸೆಟ್ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ತೆಲುಗು ಚಿತ್ರ ಶೂಟಿಂಗ್ ಸೆಟ್‌ನ ವಿಡಿಯೋ ಲೀಕ್ ಆಗಿದೆ. ನಟ ಪ್ರಭಾಸ್ ಅಭಿನಯದ, ಹನು ರಾಘವಪುಡಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಫೌಜಿ’. ಇದೊಂದು ಸ್ವಾತಂತ್ರ್ಯಪೂರ್ವ ಕಥೆಯಾಗಿದ್ದು, ಹಾಗಾಗಿ ಚಿತ್ರತಂಡವು ಬಹುಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಿಸಿ, ಸ್ವಾತಂತ್ರ್ಯ ಪೂರ್ವ ಕಾಲಘಟ್ಟವನ್ನು ಮರುಸೃಷ್ಟಿಸಿದೆ. ಆದರೆ, ಇತ್ತೀಚೆಗೆ ಶೂಟಿಂಗ್ ಸೆಟ್ ಹಾಗೂ ಪ್ರಭಾಸ್ ಪಾತ್ರದ ಫೋಟೋಗಳು ಲೀಕ್ ಆಗಿವೆ. ಈವರೆಗೆ ಒಂದು ಪೋಸ್ಟರ್ ಹೊರತುಪಡಿಸಿ, ಏನೊಂದು ಮಾಹಿತಿ ನೀಡದ ಚಿತ್ರದ ಫೋಟೋ ವೈರಲ್ ಆಗಿರುವುದು ಚಿತ್ರತಂಡದ ಕೋಪಕ್ಕೆ ಕಾರಣವಾಗಿದೆ. ಅದಕ್ಕಾಗಿ ವೈರಲ್ ಮಾಡಿದವರ ವಿರುದ್ಧ ಚಿತ್ರತಂಡ ಕಾನೂನು ಕ್ರಮಕ್ಕೆ ಮುಂದಾಗಿದೆ. ‘‘ಫೌಜಿ’ ಶೂಟಿಂಗ್ ಸೆಟ್ ಚಿತ್ರಗಳನ್ನು ಸೋರಿಕೆ ಮಾಡಿ, ವೈರಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಚಿತ್ರದ ಯಾವುದೇ ವಿಷಯವನ್ನು ಹರಿಬಿಟ್ಟರೆ, ಅವರ ವಿರುದ್ಧ ಅಗತ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಈ ರೀತಿಯಾಗಿ ಚಿತ್ರದ ವಿಷಯಗಳನ್ನು ಲೀಕ್ ಮಾಡಿದರೆ, ನಾವು ಸೃಷ್ಟಿಸಲು ಹೊರಟಿರುವ ಪ್ರಪಂಚವು ದುರ್ಬಲಗೊಳ್ಳುತ್ತದೆ. ಅದನ್ನು ನೀವು ದೊಡ್ಡ ಪರದೆ ಮೇಲೆ ನೋಡುವವರಿಗೆ ತಾಳ್ಮೆಯಿಂದ ಕಾಯಬೇಕು’ ಎಂದು ‘ಫೌಜಿ’ ತಂಡ ಮನವಿ ಮಾಡಿಕೊಂಡಿದೆ. ನಟ ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದು ಅವರಿಗೆ ಇಮಾನ್ವಿ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೇ ವರ್ಷಕ್ಕೆ ತೆರೆಗೆ ಬರಲು ಸಿದ್ಧವಾಗುತ್ತಿದೆ. ‘ಫೌಜಿ’ ಚಿತ್ರವು ಎರಡು ಭಾಗದಲ್ಲಿ ಮೂಡಿಬರಲಿದೆ ಎಂದು ನಿರ್ದೇಶಕ ಹನು ರಾಘವಪುಡಿ ಇತ್ತೀಚೆಗೆ ಘೋಷಿಸಿದ್ದಾರೆ. -ಏಜೆನ್ಸೀಸ್