ಈಗ ನನ್ನ ಟೈಮ್​ ಸರಿಯಿಲ್ಲ... ಬೇಸರದ ಮಾತನಾಡಿದ ಪೂಜಾ ಹೆಗ್ಡೆ! ಏನಾಯ್ತು ಸೌತ್ ಬ್ಯೂಟಿಗೆ? Pooja Hegde

ಸೌತ್ ಬ್ಯೂಟಿ ಪೂಜಾ ಹೆಗ್ಡೆ
ಸೌತ್ ಬ್ಯೂಟಿ ಪೂಜಾ ಹೆಗ್ಡೆ
Published on

ಪ್ರಮುಖ ಮುಖ್ಯಾಂಶಗಳು

  • 'ಜನನಾಯಗನ್'​ ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟನೆ
  • ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಬಿಜಿಯಿರುವ ಸೌತ್ ಬ್ಯೂಟಿ
  • ತೆಲುಗು ಚಿತ್ರರಂಗದಿಂದ ದೂರ ಸರಿದಿರುವ ಪೂಜಾ
  • ಪಾಡ್​ಕಾಸ್ಟ್​ ಸಂದರ್ಶನದಲ್ಲಿ ನಟಿ ಪೂಜಾ ಹೆಗ್ಡೆ ಭಾವುಕ ಮಾತುಗಳು
Pooja Hegde: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ 'ಮೋನಿಕಾ' ಹಾಡಿನಲ್ಲಿ ಮಿಂಚಿದ ಸೌತ್​ ಬ್ಯೂಟಿ ಪೂಜಾ ಹೆಗ್ಡೆ, ರಿಲೀಸ್​ನಿಂದ ಸದ್ಯ ದೂರ ಉಳಿದಿರುವ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನನಾಯಗನ್'​ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಸಖತ್ ಬಿಜಿಯಾಗಿರುವ ಪೂಜಾ, ಇತ್ತೀಚಿನ ಪಾಡ್​ಕಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಕರಿಯರ್​ ಕುರಿತಂತೆ ತಮ್ಮ ಮನದಾಳ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಟಾಲಿವುಡ್​ನಲ್ಲಿ ಕರಿಯರ್​ ಆರಂಭಿಸಿದ ಪೂಜಾ, ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಜತೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಇತ್ತೀಚೆಗೆ ತೆರೆಕಂಡ ತಮಿಳಿನ 'ರೆಟ್ರೋ' ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ, ಕಾಲಿವುಡ್​ ಮತ್ತು ಬಾಲಿವುಡ್​ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವ ಕರಾವಳಿ ಬೆಡಗಿ, 2024ರಲ್ಲಿ ತೆಲುಗು ಚಿತ್ರರಂಗದಿಂದ ದೂರ ಉಳಿದವರು ಇಂದಿಗೂ ವಾಪಾಸ್​ ಆಗಿಲ್ಲ. ಅದ್ಯಾಕೋ, ಏನೋ ಟಾಲಿವುಡ್​ನಲ್ಲಿ ಗುರುತಿಸಿಕೊಂಡ ಸೌತ್ ಬ್ಯೂಟಿ, ಜೂ.ಎನ್​ಟಿಆರ್​, ರಾಮ್​ಚರಣ್​, ಅಲ್ಲು ಅರ್ಜುನ್​, ಪ್ರಭಾಸ್​, ಮಹೇಶ್​ ಬಾಬು ಅವರಂತಹ ಸ್ಟಾರ್​ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಹಲವು ಕಾರಣಗಳಿಂದ ಕಳೆದುಕೊಂಡಿದ್ದಾರೆ.
'ಇಂಡಿಯಾ ಹೆರಾಲ್ಡ್' ತೆಲುಗು​ ಸಿನಿ ವರದಿ ಪ್ರಕಾರ, ಇತ್ತೀಚೆಗೆ ನಡೆದ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಪೂಜಾ ಹೆಗ್ಡೆ, ಪ್ರಸ್ತುತ, ನನ್ನ ಸಮಯ ಸರಿಯಿಲ್ಲ. ನಾನು ನಟಿಸಿದ ಹಲವು ಚಿತ್ರಗಳು ಫ್ಲಾಪ್ ಆಗಿವೆ. ಕೆಲವು ಸಮಯದಿಂದ, ಯಶಸ್ಸು ಎಂಬ ಪದವೇ ನನ್ನ ಜೀವನದಿಂದ ದೂರವಾಗಿದೆ. ಹೀಗಾಗಿ, ಇದು ನನ್ನ ಜೀವನದಲ್ಲಿ ಬಹಳ ವಿಶೇಷ ಸಮಯ. ಇಂದಿನಿಂದ, ನಾನು ಮಾಡುವ ಸಿನಿಮಾಗಳು ನನ್ನಲ್ಲಿರುವ ನಟಿಯನ್ನು ನಿಮಗೆ ಪರಿಚಯಿಸಲಿದೆ ಎಂದರು.
"ನನ್ನಂತಹ ಸಿನಿಮಾ ಹಿನ್ನೆಲೆ ಇಲ್ಲದ ಹುಡುಗಿಯರು ಉದ್ಯಮದಲ್ಲಿ ಮುಂದುವರಿಯುವುದು ಕಷ್ಟಸಾಧ್ಯ. ಆದರೆ, ಆ ಸವಾಲುಗಳನ್ನು ಎದುರಿಸಲು ನಾನು ಸದಾ ಸಿದ್ಧ ಎಂದಿದ್ದಾರೆ. ಪ್ರಸ್ತುತ, 'ಜನನಾಯಗನ್'​ ರಿಲೀಸ್​ಗೆ ಕಾಯುತ್ತಿರುವ ಪೂಜಾ ಹೆಗ್ಡೆ, ಈ ಚಿತ್ರದಿಂದ ಭರ್ಜರಿ ಯಶಸ್ಸು ಗಳಿಸಲಿದ್ದಾರೆ ಹಾಗೂ ಇನ್ನಷ್ಟು ಬಿಗ್ ಬಜೆಟ್​ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಗಳು ಹೆಚ್ಚಿವೆ. ಇದರೊಟ್ಟಿಗೆ ಮಲಯಾಳಂ ನಟ ದುಲ್ಕರ್​ ಸಲ್ಮಾನ್​ ಅಭಿನಯಿಸಲಿರುವ 41ನೇ ಚಿತ್ರಕ್ಕೆ ಪೂಜಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net