ಕಾರಿನೊಳಗೆ ನನ್ನ ತಾಯಿಯನ್ನು ಹತ್ತಿಸಲಿಲ್ಲ! 12ನೇ ವಯಸ್ಸಿನಲ್ಲಿ ಅಮ್ಮನಿಗೆ ಕೊಟ್ಟ ಮಾತನ್ನು ಈಡೇರಿಸಿದರು ಮೃನಾಲ್​

ನಟಿ ಮೃನಾಲ್ ಠಾಕೂರ್
ನಟಿ ಮೃನಾಲ್ ಠಾಕೂರ್
Published on

ಪ್ರಮುಖ ಮುಖ್ಯಾಂಶಗಳು

  • ಸಂಬಂಧಿಕರ ಕಾರಿನಲ್ಲಿ ಅಮ್ಮನಿಗೆ ಜಾಗವಿರಲಿಲ್ಲ
  • ಅಂದು ಮಾಡಿದ ಅವಮಾನಕ್ಕೆ ಐಷಾರಾಮಿ ಕಾರು ಖರೀದಿ
ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ತಾರೆ ಮೃನಾಲ್ ಠಾಕೂರ್ ಹೆಸರು ಕೇಳುತ್ತಿದ್ದಂತೆಯೇ 'ಸೀತಾ ರಾಮಂ' ಸಿನಿಮಾ ಒಂದು ನಿಮಿಷ ಕಣ್ಣ ಮುಂದೆ ಬರುತ್ತದೆ. ಈ ಚಿತ್ರದ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಚಿತ್ರರಸಿಕರ ಮನಸ್ಸು ಗೆದ್ದಿರುವ ಮೃನಾಲ್, ಸದ್ಯ ಹಲವಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಿಗ್ ಬಜೆಟ್​ ಹಾಗೂ ಬಹುನಿರೀಕ್ಷಿತ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಮೃನಾಲ್​, 12ನೇ ವಯಸ್ಸಿನಲ್ಲಿ ತಮ್ಮ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಆರಂಭದಲ್ಲಿ, ಧಾರಾವಾಹಿಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಈ ಬೆಡಗಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಲು ಅನೇಕರು ಹಿಂಜರಿದರು. ಆದರೆ, ತಮ್ಮ ಪ್ರತಿಭೆಯಿಂದ ಇಂದು ಅವರಿಗೆಲ್ಲ ಖಡಕ್ ಉತ್ತರ ಕೊಟ್ಟಿರುವ ಮೃನಾಲ್​, ಅಂದು ತಮ್ಮ ತಾಯಿಗೆ ಸಂಬಂಧಿಕರು ಮಾಡಿದ ಅವಮಾನಕ್ಕೆ ಐಷಾರಾಮಿ ಕಾರು ಖರೀದಿಸುವ ಮೂಲಕ ಮುಖಕ್ಕೆ ಹೊಡೆದಂತೆ ಉತ್ತರ ನೀಡಿದರು. ಈ ಮೂಲಕ ತಮ್ಮ ತಾಯಿಗೆ ಕೊಟ್ಟ ಮಾತನ್ನು ಈಡೇರಿಸಿ, ಅವರ ಕಣ್ಣಂಚಲ್ಲಿ ನೀರು ತರಿಸಿದರು.
2023ರ ಫೆಬ್ರವರಿಯಲ್ಲಿ ದುಬಾರಿ ಮೌಲ್ಯದ ಮರ್ಸಿಡಿಸ್​ ಬೆನ್ಜ್​ ಕಾರು ಖರೀದಿ ಮಾಡಿದ ಮೃನಾಲ್​, ಐಷಾರಾಮಿ ಕಾರನ್ನೇ ಏಕೆ ಕೊಂಡುಕೊಂಡಿದ್ದು ಎಂಬುದರ ಹಿಂದಿರುವ ನೋವಿನ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡರು. "ನಾನು ಬಡತನದಲ್ಲಿ ಜನಿಸಿದೆ. ನನ್ನ ತಾಯಿ ನನ್ನನ್ನು ಬೆಳೆಸಲು ಮತ್ತು ಕುಟುಂಬವನ್ನು ನಡೆಸಲು ತುಂಬಾ ಕಷ್ಟಪಟ್ಟಿದ್ದಾರೆ. ಅನೇಕ ಆರ್ಥಿಕ ಸಮಸ್ಯೆಗಳಿದ್ದವು. ಅವೆಲ್ಲದರ ನಡುವೆಯೂ ನನ್ನಮ್ಮ ನಮ್ಮನ್ನು ಬೆಳೆಸಿದರು. ನಮ್ಮ ಸಂಬಂಧಿಕರು ನಮ್ಮನ್ನು ಕೀಳಾಗಿ ಕಾಣುತ್ತಿದ್ದರು. ಅವರು ಆಗಾಗ್ಗೆ ನಮ್ಮನ್ನೆಲ್ಲ ಅವಮಾನಿಸುತ್ತಿದ್ದರು" ಎಂದಿದ್ದಾರೆ.
"ಸಂಬಂಧಿಕರು ನನ್ನ ತಾಯಿಯನ್ನು ಅವರ ಕಾರಿನಲ್ಲಿ ಕೂರಿಸಲು ಇಷ್ಟಪಡಲಿಲ್ಲ. ಇಲ್ಲಿ ಕುಳಿತು ಪ್ರಯಾಣಿಸುವುದಕ್ಕೆ ಅರ್ಹರಲ್ಲ ಎಂದು ಅವಮಾನಿಸಿದ್ದರು. ಅಮ್ಮನನ್ನು ರಸ್ತೆಯಲ್ಲಿಯೇ ಬಿಟ್ಟು ಅವರು ಹೋಗಿದ್ದರು. ಆ ಘಟನೆ ನನಗೆ ನಿಜವಾಗಿಯೂ ಭಾರೀ ಘಾಸಿ ಮಾಡಿತು. ಅಂದೇ ನಾನು ಯೋಚಿಸಿದೆ, ಮುಂದೊಂದು ದಿನ ನನ್ನದೇ ದುಡಿಮೆಯ ಹಣದಲ್ಲಿ ಕಾರು ಖರೀದಿಸಿ, ಅಮ್ಮನನ್ನು ಓಡಾಡಿಸಬೇಕು ಅಂತ. ಅಂತೆಯೇ ಅದನ್ನು ಈಡೇರಿಸಿದೆ"​ ಎಂದು ಹೇಳಿದರು.
"ನನ್ನ ಆ ಕನಸು ಕಡೆಗೂ ನನಸಾಯಿತು. ನನ್ನ ತಾಯಿಯನ್ನು ಅವಮಾನಿಸಿದ ಯಾರೊಬ್ಬರ ಬಳಿಯೂ ಬೆನ್ಜ್​ ಕಾರಿಲ್ಲ. ನಮ್ಮ ಇಡೀ ಕುಟುಂಬದಲ್ಲಿ ಈ ಕಾರನ್ನು ಹೊಂದುವುದರಲ್ಲಿ ನಾನೇ ಮೊದಲು" ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ಬರೆದುಕೊಂಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೃನಾಲ್​ ನಟ ಆದಿವಿ ಶೇಷ್ ಅವರೊಂದಿಗೆ 'ಡೆಕಾಯ್ಟ್' ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕ್ರೈಮ್, ಥ್ರಿಲ್ಲರ್ ಕಥಾಹಂದರ ಈ ಚಿತ್ರ 2026ರ ಮಾರ್ಚ್​ನಲ್ಲಿ ತೆರೆಕಾಣಲು ಸಿದ್ಧವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net