3 ಚಿತ್ರಗಳ ರಿಲೀಸ್​ ಮಧ್ಯೆ ವಿಚಿತ್ರ ಅನುಭವ ಬಿಚ್ಚಿಟ್ಟ ಕೃತಿ ಶೆಟ್ಟಿ! ಅಷ್ಟಕ್ಕೂ 'ಉಪ್ಪೇನಾ' ಬೆಡಗಿಗೆ ಆಗಿದ್ದೇನು?

ಕೃತಿ ಶೆಟ್ಟಿ
ಕೃತಿ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ತಮಗಾದ ವಿಚಿತ್ರ ಅನುಭವ ಹಂಚಿಕೊಂಡ ಸೌತ್​ ಬ್ಯೂಟಿ
  • ಹೋಟೆಲ್ ರೂಮ್​ನಲ್ಲಿ ಆತ್ಮ ಪ್ರತ್ಯಕ್ಷ
  • ಲೈಟ್ ಆನ್ ಮಾಡಿದ ಕೂಡಲೇ ಜೋರು ಶಬ್ದ! ಕಣ್ಮರೆ
ಆಂಧ್ರಪ್ರದೇಶ: 2021ರಲ್ಲಿ ತೆರೆಕಂಡ ತೆಲುಗು ಬ್ಲಾಕ್​ಬಸ್ಟರ್​ 'ಉಪ್ಪೇನಾ' ಚಿತ್ರದಿಂದ ಸಿನಿಪ್ರಿಯರ ಮನಗೆದ್ದ ಕರಾವಳಿ ಬೆಡಗಿ ಕೃತಿ ಶೆಟ್ಟಿ, ಒಂದು ಲ್ಯಾಂಗ್​ ಗ್ಯಾಪ್​ ಬಳಿಕ ಇದೀಗ ಮತ್ತೆ ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗಿದ್ದಾರೆ. ಈ ಬಾರಿ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಹುನಿರೀಕ್ಷಿತ ಚಿತ್ರಗಳ ಮೂಲಕ ಸಿನಿಪ್ರಿಯರ ಎದುರಿಗೆ ಹಾಜರಾಗಲಿದ್ದಾರೆ ಕೃತಿ.
ಮೂರು ಸಿನಿಮಾಗಳ ರಿಲೀಸ್​ ಓಡಾಟದ ಮಧ್ಯೆ ನಟಿ ಇತ್ತೀಚೆಗೆ ತಮಗಾದ ವಿಚಿತ್ರ ಅನುಭವವನ್ನು ಹಂಚಿಕೊಂಡಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ತಮ್ಮ ಹೊಸ ಚಿತ್ರದ ಚಿತ್ರೀಕರಣ ಆರಂಭದ ಹಿಂದಿನ ರಾತ್ರಿ, ತಮ್ಮ ಹೋಟೆಲ್ ರೂಮ್​ನಲ್ಲಿ ಒಂದು ಆತ್ಮವನ್ನು ಕಂಡಿದ್ದಾಗಿ ಕೃತಿ ಹೇಳಿಕೊಂಡಿದ್ದಾರೆ.
ನಳನ್ ಕುಮಾರಸ್ವಾಮಿ ನಿರ್ದೇಶನದ ಮತ್ತು ತಮಿಳು ನಟ ಕಾರ್ತಿ ನಟಿಸುತ್ತಿರುವ 'ವಾ ವಟ್ಟಿಯಾರ್' ಚಿತ್ರದಲ್ಲಿನ ಪಾತ್ರದ ಬಗ್ಗೆ ಮಾತನಾಡಿದ ಕೃತಿ, "ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗುವ ಹಿಂದಿನ ರಾತ್ರಿ ನನಗೆ ಒಂದು ವಿಚಿತ್ರ ಅನುಭವ ಆಯಿತು. ನಾನು ನನ್ನ ಅಮ್ಮನೊಂದಿಗೆ ಹೋಟೆಲ್ ರೂಮ್​ನಲ್ಲಿ ಉಳಿದಿದ್ದೆ. ಇದೇ ಸಮಯದಲ್ಲಿ, ಒಂದು ಆತ್ಮದ ರೂಪವನ್ನು ಕಂಡೆ. ಕೂಡಲೇ, ಲೈಟ್​​ ಆನ್​ ಮಾಡಿದೆವು. ಬೆಳಕು ಕಾಣುತ್ತಿದ್ದಂತೆ ಜೋರಾದ ಶಬ್ದ ಬಂತು ಮತ್ತು ಆ ರೂಪ ಕಣ್ಮರೆಯಾಯಿತು" ಎಂದಿದ್ದಾರೆ.
"ಆ ಆತ್ಮವು ನನಗೆ ಏನೋ ಹೇಳಲು ಬಂದಿತೋ ಅಥವಾ ಪಾತ್ರಕ್ಕಾಗಿ ನಾನು ಮಾಡುತ್ತಿದ್ದ ಅಭ್ಯಾಸದಿಂದಾಗಿಯೋ ನನಗೆ ಸರಿಯಾಗಿ ತಿಳಿದಿಲ್ಲ. ಮೊದಲಿನಿಂದಲೂ ನಮ್ಮಲ್ಲಿ ಆತ್ಮಗಳನ್ನು ನಂಬುತ್ತೇವೆ. ಏಕೆಂದರೆ, ನಾನು ತುಳು ಸಂಪ್ರದಾಯಕ್ಕೆ ಸೇರಿದವಳು. ನಾವು ನಮ್ಮ ಪೂರ್ವಜರನ್ನು ದೇವರುಗಳೆಂದು ಪರಿಗಣಿಸುತ್ತೇವೆ. ಅವರು, ಸದಾ ನಮ್ಮನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ನಮ್ಮದು. ಈಗ, ಈ ಘಟನೆಯೊಂದಿಗೆ ಆ ನಂಬಿಕೆ ಇನ್ನೂ ಬಲವಾಗಿದೆ" ಎಂದು ಕೃತಿ ಹೇಳಿಕೊಂಡಿದ್ದಾರೆ ಎಂದು ತೆಲುಗು ಸಿನಿ ವರದಿಗಳು ತಿಳಿಸಿವೆ.
2019ರಲ್ಲಿ 'ಸೂಪರ್​ 30' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಕೃತಿ, ಇದೀಗ ಮೂರು ಬಹುನಿರೀಕ್ಷಿತ ತಮಿಳು ಚಿತ್ರಗಳ ಮೂಲಕ ಭರ್ಜರಿ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ. 'LIK' (ಲವ್ ಇನ್ಶೂರೆನ್ಸ್ ಕಂಪನಿ), 'ವಾ ವಾಥಿಯಾರ್' ಮತ್ತು 'ಜಿನೀ' ಎಂಬ ಮೂರು ಸಿನಿಮಾಗಳು ಡಿಸೆಂಬರ್​ನಲ್ಲಿ ರಿಲೀಸ್​ ಆಗಲು ಎದುರುನೋಡುತ್ತಿವೆ. ಅದರಲ್ಲಿ ಎರಡು ಚಿತ್ರಗಳು ರೆಡಿಯಾಗಿದ್ದು, ಒಂದು ಸಿನಿಮಾದ ರಿಲೀಸ್ ಮಾತ್ರ ಅಧಿಕೃತವಾಗಬೇಕಿದೆ.
ಇತ್ತೀಚೆಗಷ್ಟೇ, 'ಡ್ಯ್ರಾಗನ್' ಖ್ಯಾತಿಯ ಪ್ರದೀಪ್ ರಂಗನಾಥನ್ ಅಭಿನಯದ LIK ಇದೇ ಡಿಸೆಂಬರ್ 18ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇದರ ಬೆನ್ನಲ್ಲೇ ಕಾರ್ತಿ ಅವರ 'ವಾ ವಾಥಿಯಾರ್' ಟ್ರೇಲರ್​​ ಈಗಷ್ಟೇ ಹೊರಬಂದಿದೆ. ಇನ್ನು ರವಿ ಮೋಹನ್ ನಟನೆಯ 'ಜಿನೀ' ಚಿತ್ರದ ಮೊದಲ ಸಿಂಗಲ್ 'ಅಬ್ದಿ ಅಬ್ದಿ' ಇತ್ತೀಚಿಗಷ್ಟೇ ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡು ನೆಟ್ಟಿಗರ ಗಮನ ಸೆಳೆದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net