ಪ್ರಧಾನಿ ಮೋದಿಗೆ ಹೆಮ್ಮೆಯ ಅಂಧಭಕ್ತೆ ನಾನು... ಪವನ್ ಕಲ್ಯಾಣ್​ ಮಾಜಿ ಪತ್ನಿಯಿಂದ ಮುಲಾಜಿಲ್ಲದ ಮಾತು! | Renu Desai

ನಟಿ ರೇಣು ದೇಸಾಯಿ ಬಹಿರಂಗ ಹೇಳಿಕೆ
ನಟಿ ರೇಣು ದೇಸಾಯಿ ಬಹಿರಂಗ ಹೇಳಿಕೆ
Published on

ಪ್ರಮುಖ ಮುಖ್ಯಾಂಶಗಳು

  • 'ಧುರಂಧರ್​ 2' ಸಿನಿಮಾ ವೀಕ್ಷಿಸಿದ ನಟಿ ರೇಣು ದೇಸಾಯಿ
  • ನಾನು ಪ್ರಧಾನಿ ನರೇಂದ್ರ ಮೋದಿ ಅಂಧಭಕ್ತೆ ಎಂದ ನಟಿ
  • ಬಹಿರಂಗ ಹೇಳಿಕೆ ಮೂಲಕ ಟಾಂಗ್​ ಕೊಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ
ಆಂಧ್ರಪ್ರದೇಶ: ಟಾಲಿವುಡ್​ ಪವರ್​ಸ್ಟಾರ್​ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಜಾಗತಿಕವಾಗಿ ಭಾರೀ ಸದ್ದು ಮಾಡುತ್ತಿರುವ ಧುರಂಧರ್​ 2 ಚಿತ್ರವನ್ನು ವೀಕ್ಷಿಸಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸಿನಿಮಾ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ನಟಿ, ಬಿಚ್ಚು ನುಡಿಯ ಮೂಲಕ ಟೀಕಾಕಾರರ ಹುಬ್ಬೇರಿಸಿದ್ದಾರೆ. 
ಬಾಲಿವುಡ್​ನ ಸ್ಟಾರ್ ಹೀರೋ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ವೀಕ್ಷಿಸಿದ ರೇಣು, ಚಿತ್ರದ ಕಥೆ ಮತ್ತು ಚಿತ್ರತಂಡವನ್ನು ಹೊಗಳಿದ್ದಾರೆ. ಭಾರತೀಯ ಸೇನೆ ಮತ್ತು ಗುಪ್ತಚರ ಸಂಸ್ಥೆಗಳನ್ನು ಗೌರವಿಸುವ ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡಬೇಕು ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ. ಚಿತ್ರದ ಆಯ್ದ ಕೆಲವು ಭಾಗಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
"ನಿಮಗೆ ಭಾರತೀಯ ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ಗೌರವವಿದ್ದರೆ, ನೀವು 'ಧುರಂಧರ್' 1 ಮತ್ತು 2 ಎರಡನ್ನು ನೋಡಬೇಕು. ಯೋಧರಿಂದಲೇ ಇಂದು ನಾವು ಮನೆಯಲ್ಲಿ ಶಾಂತಿಯುತವಾಗಿ ಮಲಗಬಹುದು" ಎಂದಿದ್ದಾರೆ. ಇದರೊಟ್ಟಿಗೆ ಭಗವದ್ಗೀತೆಯನ್ನು ಉಲ್ಲೇಖಿಸುವ ಚಿತ್ರದ ಒಂದು ಭಾಗವನ್ನು ಹಂಚಿಕೊಳ್ಳುವ ಜೊತೆಗೆ ನಿರ್ದೇಶಕರ ಕೆಲಸವನ್ನು ಕೊಂಡಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ರೇಣು, ಸಿನಿಮಾದಲ್ಲಿ ಬರುವ ದಾವೂದ್ ಇಬ್ರಾಹಿಂ ಪಾತ್ರದ ಬಾದ್‌ಶಾ ಸಾಬ್ ಅವರ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ. "ಚಹಾ ಮಾರಾಟಗಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಜನರು ಭಯಭೀತರಾಗಿದ್ದಾರೆ" ಎಂಬ ಸಂಭಾಷಣೆಯನ್ನು ಪೋಸ್ಟ್​ ಮಾಡಿ, "ನಾನು ಪ್ರಧಾನಿ ಮೋದಿಜಿ ಮತ್ತು ಬಿಜೆಪಿಯ ಅಂಧಭಕ್ತೆ" ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದು ಒಂದಷ್ಟು ಮಂದಿಗೆ ಖುಷಿ ಕೊಟ್ಟರೆ, ಇನ್ನೂ ಕೆಲವರ ಕಿಡಿನುಡಿಗೆ ಕಾರಣವಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net