Ashu Reddy - ಮದುವೆ ಹೆಸರಲ್ಲಿ ಮೋಸ! ನಟಿಯ ವಿರುದ್ಧ ದೂರು ದಾಖಲು

ಅಶು ರೆಡ್ಡಿ
ಅಶು ರೆಡ್ಡಿ
Published on
Ashu Reddy -
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮೂಲಕ ಮುನ್ನೆಲೆಗೆ ಬಂದ ಅಶು ರೆಡ್ಡಿ ಬಿಗ್​ಬಾಸ್​ ತೆಲುಗು ಸೀಸನ್​ 3ರಲ್ಲಿ ಭಾಗವಹಿಸಿದ್ದರು. ಜಾಲತಾಣದಲ್ಲಿ ಬೋಲ್ಡ್​ ಲುಕ್​ ಮೂಲಕ್​ ಜನಪ್ರಿಯರಾಗಿದ್ದ ಅವರಿಗೆ ಕ್ರಮೇಣ ಸಿನಿಮಾಗಳಲ್ಲೂ ಅವಕಾಶಗಳು ಅರಸಿ ಬಂದವು. "ಘನಿ', "ಚಲ್​ ಮೋಹನ್​ ರಂಗ' ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದರು. ಇಂತಹ ಅಶು ರೆಡ್ಡಿ ವಿರುದ್ಧ ಇದೀಗ ಹೈದರಾಬಾದ್​ ಸೆಂಟ್ರಲ್​ ಕ್ರೈಮ್​ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ನನ್ನ ಮಗನಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿದ್ದಾರೆಂದು ಸತ್ಯನಾರಾಯಣ ಎಂಬುವವರು ಎಫ್​ಐಆರ್​ ದಾಖಲಿಸಿದ್ದಾರೆ. ಲಂಡನ್​ನಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ಧಮೇರ್ಂದ್ರರನ್ನು ಅಶು ರೆಡ್ಡಿ 2018ರಲ್ಲಿ ಭೇಟಿಯಾಗಿದ್ದರಂತೆ. ಆ ಭೇಟಿಯಲ್ಲಿ ಪರಿಚಯವಾಗಿ, ಗೆಳೆತನ ಪ್ರೀತಿ ತಿರುಗಿತ್ತಂತೆ. ಆಗಿನಿಂದ 2025ರವರೆಗೂ ಧಮೇರ್ಂದ್ರರನ್ನು ಮದುವೆಯಾಗುವುದಾಗಿ ನಂಬಿಸಿ ಅಶು ರೆಡ್ಡಿ ಅವರ ಬಳಿ ಐದು ಕೆಜಿಯಷ್ಟು ಬಂಗಾರದ ಆಭರಣ, ದುಬಾರಿ ಕಾರುಗಳು, ಉಡುಗೊರೆ, ಫ್ಲ್ಯಾಟ್​ಗಳನ್ನು ಪಡೆದಿದ್ದರಂತೆ. ಅಶು ಸಹೋದರಿ ಕೂಡ ಧಮೇರ್ಂದ್ರ ಬಳಿ ₹50 ಲಕ್ಷ ಹಣ ಪಡೆದಿದ್ದರಂತೆ. ಕಳೆದ ವರ್ಷ ಮದುವೆಯ ಬಗ್ಗೆ ಮಾತನಾಡಿದಾಗ ಅಶು ರೆಡ್ಡಿ ಹಿಂದೇಟು ಹಾಕಿದ್ದು, ಧರ್ಮೇಂದ್ರ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಹೀಗಾಗಿ ಅವರ ತಂದೆಯ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಹಾಗಂತ ಅಶು ರೆಡ್ಡಿ ವಿವಾದದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2023ರಲ್ಲಿ ಡ್ರಗ್​ ಪೆಡ್ಲಿಂಗ್​ ಪ್ರಕರಣದಲ್ಲಿ ತೆಲುಗು ನಿರ್ಮಾಪಕ ಕೆ.ಪಿ. ಚೌಧರಿ ಬಂಧನವಾಗಿತ್ತು. ಆತನ ಜತೆ ಪದೇ ಪದೆ ಫೋನ್​ ಸಂಪರ್ಕದಲ್ಲಿದ್ದ ಕಾರಣ ಅಶು ರೆಡ್ಡಿಯನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನು ಮದುವೆ ಮೋಸ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡದಿದ್ದರೂ, ತಮ್ಮ ಸಮ್ಮತಿ ಇಲ್ಲದೇ ತಮ್ಮ ಬಗ್ಗೆ ಅಪಪ್ರಚಾರ ಮಾಡಿದರೆ ಕಾನೂನು ಹೋರಾಟ ಮಾಡುವುದಾಗಿ ಅಶು ರೆಡ್ಡಿ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. -ಏಜೆನ್ಸೀಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net