ಪ್ಯಾನ್ ಇಂಡಿಯಾ "ಪುಷ್ಪ 2' ಚಿತ್ರದ "ಹೂ ಅಂತೀಯಾ', ಕನ್ನಡದ "ವೇದ' ಚಿತ್ರದ "ಗಿಲ್ಲಕ್ಕೋ ಶಿವ', "ಕಾಟೇರ' ಸಿನಿಮಾದ "ಪಸಂದಾಗವ್ನೆ' ಸೇರಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಹೆಗ್ಗಳಿಕೆ ತೆಲುಗು ಗಾಯಕಿ ಮಂಗ್ಲಿಗೆ ಸಲ್ಲುತ್ತದೆ. ಹೀಗಾಗಿಯೇ ಅವರಿಗೆ ತೆಲುಗು ರಾಜ್ಯಗಳಲ್ಲಿರುಷ್ಟೇ ಅಭಿಮಾನಿಗಳು ಕರ್ನಾಟಕದಲ್ಲೂ ಇದ್ದಾರೆ. ಇಂತಹ ಮಂಗ್ಲಿಗೆ ಇದೀಗ ಮೈಕ್ರೋ ಫೈನಾನ್ಸ್ ವಿವಾದವೊಂದು ಸುತ್ತಿಕೊಂಡಿದೆ. ಸುಬ್ಬರಾವ್ ಎಂಬ ವಕೀಲರೊಬ್ಬರು ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ಸ್ಕೀಮ್ ಹೆಸರಿನಲ್ಲಿ ಮಂಗ್ಲಿ ತಮಗೆ ₹10 ಕೋಟಿ ವಂಚಿಸಿದ್ದಾರೆಂದು ಗಾಯಕಿಯ ಜತೆ ಇನ್ನೂ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೇ ಅವರಿಂದ ತಮಗೆ ಪ್ರಾಣ ಬೆದರಿಕೆ ಇದೆ ಎಂದೂ ದೂರಿದ್ದಾರೆ. ಮತ್ತೊಂದೆಡೆ ಗಾಯಕಿ ಮಂಗ್ಲಿ ಸಹ ಸುಬ್ಬರಾವ್ ವಿರುದ್ಧ ಕಿರುಕುಳ ನೀಡುತ್ತಿದ್ದಾರೆಂದು ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಮಾ. 21ರಂದು ಸುಬ್ಬರಾವ್ ನನ್ನನ್ನು ಭೇಟಿ ಮಾಡಿದ್ದರು. ಅವರ ಒರಟು ಮಾತುಗಳು, ನಡವಳಿಕೆ ನನಗೆ ಇಷ್ಟವಾಗದ ಕಾರಣ, ಅವರು ಮತ್ತೆ ಬಂದಾಗ ನಾನವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದೀಗ ₹150 ಕೋಟಿ ವಂಚಿಸಿದ್ದೇನೆ ಎಂದು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ' ಎಂದು ಮಂಗ್ಲಿ ದೂರು ದಾಖಲಿಸಿದ್ದಾರೆ. ಹಾಗೇ ಮಾ. 23ರಂದೇ ಜಾಲತಾಣದಲ್ಲಿ ಮಂಗ್ಲಿ ತಮಗೂ ಮೈಕ್ರೋ ಫೈನಾನ್ಸ್ ಸ್ಕೀಮ್ಗೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಸುಬ್ಬರಾವ್ ಮಂಗ್ಲಿ ವಿರುದ್ಧ ದೂರು ನೀಡಿರುವ ಪಂಜಗುಟ್ಟ ಪೊಲೀಸರು ಹಾಗೂ ಮಂಗ್ಲಿ ಸುಬ್ಬರಾವ್ ವಿರುದ್ಧ ದೂರು ನೀಡಿರುವ ನರಸಿಂಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.