ಸಾಮಾನ್ಯವಾಗಿ ಸಿನಿಮಾಗಳ ಗ್ಲಿಂಪ್ಸ್, ಪಾತ್ರ ಪರಿಚಯಿಸುವ ವಿಡಿಯೋಗಳು ಒಂದು-ಒಂದೂವರೆ ನಿಮಿಷ ಇರುತ್ತವೆ. ಅಷ್ಟರಲ್ಲಿಯೇ ಒಂದು ಸಣ್ಣ ಝಲಕ್ ನೀಡಿ, ಚಿತ್ರತಂಡಗಳು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುವ ಪ್ರಯತ್ನ ಮಾಡುತ್ತವೆ. ಇದೀಗ ಗ್ಲಿಂಪ್ಸ್ ಎಂದರೆ ಕಡಿಮೆ ಅವಧಿಯಲ್ಲಿ ಇರಬೇಕು ಎಂಬ ಅಲಿಖಿತ ನಿಯಮವನ್ನು ತೆಲುಗಿನ ‘ಡ್ರ್ಯಾಗನ್’ ಚಿತ್ರ ಬ್ರೇಕ್ ಮಾಡಿದೆ. ಚಿತ್ರತಂಡ ರಿಲೀಸ್ ಮಾಡಿರುವ ಗ್ಲಿಂಪ್ಸ್ ಅವಧಿಯೇ 4.29 ನಿಮಿಷ ಇದ್ದು, ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ತೆಲುಗು ನಟ ಜೂ.ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರವಿದು. ಬುಧವಾರ (ಮೇ 20) ಜೂ.ಎನ್‌ಟಿಆರ್ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ‘ಡ್ರ್ಯಾಗನ್’ ತಂಡ ಮಂಗಳವಾರ (ಮೇ 19) ರಾತ್ರಿ 11.52ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ಲಿಂಪ್ಸ್ ರಿಲೀಸ್ ಮಾಡಿ, ಬರ್ತ್‌ಡೇ ಗ್‌ಟಿ ನೀಡಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಈ ವಿಡಿಯೋ ಗ್ಲಿಂಪ್ಸ್ ತಾಂತ್ರಿಕ ಗುಣಮಟ್ಟದ ಜತೆಗೆ ಪಾತ್ರಗಳು, ನಿರೂಪಣೆ ಮತ್ತು ಹಿನ್ನೆಲೆ ಸಂಗೀತದ ಮೂಲಕ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದು ಐದು ಭಾಷೆಗಳಿಂದ ಮೂರು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. 2027ರ ಜೂನ್ 11ಕ್ಕೆ ‘ಡ್ರ್ಯಾಗನ್’ ವಿಶ್ವಾದ್ಯಂತ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. -ಏಜೆನ್ಸೀಸ್