ತೆಲಂಗಾಣ ಸಿಎಂಗೆ ಕೊಟ್ಟ 40,000 ರೂ. ಮೌಲ್ಯದ ಉಚಿತ ಐಪಿಎಲ್​ ಟಿಕೆಟ್ ನಟಿಯ ಕೈಯಲ್ಲಿ! ಫೋಟೋ ವೈರಲ್​ ಬೆನ್ನಲ್ಲೇ ಡಿಲೀಟ್​

ನಟಿ ಕುಶಿತಾ ಕಲ್ಲಪ್ಪು
ನಟಿ ಕುಶಿತಾ ಕಲ್ಲಪ್ಪು
Published on

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣ ಸಿಎಂ ಹೆಸರಿನ ಐಪಿಎಲ್​ ಟಿಕೆಟ್​ಗಳು ಯುವ ನಟಿಯ ಕೈಯಲ್ಲಿ
  • ತನ್ನ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದ ನಟಿ ಕುಶಿತಾ ಕಲ್ಲಪ್ಪು
  • 40,000 ರೂ. ಮೌಲ್ಯದ್ದು ಎನ್ನಲಾದ ಉಚಿತ ಟಿಕೆಟ್​ಗಳು ನಟಿಯ ಕೈಗೆ ಹೇಗೆ ಬಂತು? ಎಂಬ ಅನುಮಾನ ವ್ಯಕ್ತ
ಹೈದರಾಬಾದ್​: ಮೊನ್ನೆ ಮೊನ್ನೆಯಷ್ಟೇ ಉಪ್ಪಾಳ್​ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪಂದ್ಯದಲ್ಲಿ ಎಸ್​ಆರ್​ಎಚ್​ ತವರಿನಲ್ಲಿ ಸುಲಭ ಗೆಲುವು ಸಾಧಿಸಿತು. ಇದೇ ಪಂದ್ಯಕ್ಕೆ ಆಗಮಿಸಿದ್ದ ನಟಿ, ಮಾಡೆಲ್​ ಕುಶಿತಾ ಕಲ್ಲಪ್ಪು ಇದೀಗ ನೆಟ್ಟಿಗರ ಅನುಮಾನ, ಗೊಂದಲಕ್ಕೆ ಕಾರಣವಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೆಸರಿನಲ್ಲಿ ಹಂಚಿಕೆಯಾಗಿದ್ದ 40 ಸಾವಿರ ರೂ. ಮೌಲ್ಯದ ಉಚಿತ ಐಪಿಎಲ್ ಟಿಕೆಟ್‌ಗಳು ಕುಶಿತಾ ಕಲ್ಲಪ್ಪು ಅವರ ಕೈಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಈ ವಿಷಯ ಹೊಸ ವಿವಾದಕ್ಕೂ ಕಾರಣವಾಗಿದೆ. ನಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಐಪಿ ಟಿಕೆಟ್‌ಗಳನ್ನು ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಬಗ್ಗೆ ಹಲವರಿಗೆ ಗೊತ್ತಾಗಿದೆ. 
ನಟಿಯ ಕೈಯಲ್ಲಿರುವ ಟಿಕೆಟ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿಗಳಿಗೆ ಎಂದು ಪ್ರತ್ಯೇಕವಾಗಿ ಮುದ್ರಿಸಲಾದ ಟಿಕೆಟ್‌ಗಳು ಕುಶಿತಾ ಅವರ ಕೈಗೆ ಹೇಗೆ ಬಂತು? ಅಸಲಿಗೆ ಅದನ್ನು ಆಕೆಗೆ ಕೊಟ್ಟವರು? ನಟಿಗೆ ಸಿಎಂ ಅವರ ಪರಿಚಯ​ ಇದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ನೆಟ್ಟಿಗರ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ವಿರೋಧ ಪಕ್ಷಗಳು ಸಹ ಪ್ರಶ್ನಿಸಿರುವುದು ಗಮನಾರ್ಹ.
ಉಚಿತವಾಗಿ ನೀಡಲಾದ ಈ ಐಪಿಎಲ್​ ಟಿಕೆಟ್​ಗಳ ಬೆಲೆ ಸುಮಾರು 40,000 ರೂ. ಮೌಲ್ಯ ಎನ್ನಲಾಗಿದೆ. ಸನ್‌ರೈಸರ್ಸ್ ಎಲೈಟ್ ಲೌಂಜ್ ಟಿಕೆಟ್‌ಗಳು ಇದಾಗಿದ್ದು, ಮುಖ್ಯಮಂತ್ರಿ ಕಚೇರಿಗೆ ಅಧಿಕೃತವಾಗಿ ನೀಡಲಾಗಿದೆ. ಹೀಗಿರುವಾಗ, ಈ ಟಿಕೆಟ್‌ಗಳು ನಟಿಯ ಬಳಿ ಹೇಗೆ ಬರಲು ಸಾಧ್ಯ? ಎಂಬ ಅನುಮಾನಗಳು ವ್ಯಕ್ತವಾಗಿದೆ. ತೆಲುಗು ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಯುವ ನಟಿ, ಈ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಫೋಟೋವನ್ನು ಡಿಲೀಟ್​ ಮಾಡಿದ್ದಾರೆ.
ಶಿಷ್ಟಾಚಾರದ ಪ್ರಕಾರ, ಸಿಎಂಗೆ ನೀಡಲಾದ ಟಿಕೆಟ್‌ ಅಥವಾ ಪಾಸ್‌ಗಳನ್ನು ಸಾಮಾನ್ಯವಾಗಿ ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಅನ್ವಯವಾಗುತ್ತದೆ. ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ, ರಾಜಕೀಯ ಪದಾಧಿಕಾರಿಗಳು ಅಥವಾ ಸ್ನೇಹಿತರು ವೈಯಕ್ತಿಕವಾಗಿ ಇವುಗಳನ್ನು ಬಳಸಿಕೊಳ್ಳುವಂತಿಲ್ಲ. ಈ ಹಿಂದೆ ಉಚಿತ ಟಿಕೆಟ್​ಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಜಟಾಪಟಿ ನಡೆದಿತ್ತು.
ಎಚ್‌ಸಿಎ ಕಾರ್ಪೊರೇಟ್ ಬಾಕ್ಸ್‌ಗೆ ಬೀಗ ಹಾಕಿ 2025ರಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಜೊತೆಗೆ ಹೆಚ್ಚಿನ ಟಿಕೆಟ್‌ಗಳಿಗೆ ಬೇಡಿಕೆ ಇಟ್ಟಿದೆ ಎಂಬ ಆರೋಪವಿತ್ತು. ಈ ಘಟನೆಯ ತೀವ್ರತೆ ಬೆನ್ನಲ್ಲೇ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಇದಕ್ಕೆ ಬಗ್ಗೆ ವಿಜಿಲೆನ್ಸ್ ತನಿಖೆಗೆ ಆದೇಶಿಸಿದ್ದರು. ಇಷ್ಟೆಲ್ಲ ನಡೆದಿರುವಾಗ, ಯುವ ನಟಿಯ ಕೈಯಲ್ಲಿ ಸಿಎಂ ಹೆಸರಿನ ಉಚಿತ ಟಿಕೆಟ್​ಗಳು ಕಾಣಿಸಿಕೊಂಡಿರುವುದು ಸದ್ಯ ಹಲವರ ಟೀಕೆ, ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net