ಐಪಿಎಲ್ ಆರಂಭಕ್ಕೂ ಮುನ್ನ ಸಿಎಸ್‌ಕೆಗೆ ಕಾನೂನು ಸಂಕಷ್ಟ: ರಜನಿಕಾಂತ್ ಸಿನಿಮಾ ಸಂಗೀತ ಬಳಕೆ; ಹಕ್ಕುಸ್ವಾಮ್ಯ ಉಲ್ಲಂಘನೆ ಕೇಸ್ ದಾಖಲಿಸಿದ ಸನ್ ಟಿವಿ! Chennai Super Kings

 ಚೆನ್ನೈ ಸೂಪರ್ ಕಿಂಗ್ಸ್, ಸೂಪರ್​ಸ್ಟಾರ್​ ರಜನಿಕಾಂತ್​
ಚೆನ್ನೈ ಸೂಪರ್ ಕಿಂಗ್ಸ್, ಸೂಪರ್​ಸ್ಟಾರ್​ ರಜನಿಕಾಂತ್​
Published on

ಪ್ರಮುಖ ಮುಖ್ಯಾಂಶಗಳು

  • ಸಿಎಸ್‌ಕೆ ತನ್ನ ಹೊಸ ಜೆರ್ಸಿ ಪ್ರಚಾರಕ್ಕಾಗಿ ರಜನಿಕಾಂತ್ ಅವರ 'ಜೈಲರ್', 'ಕೂಲಿ' ಸಿನಿಮಾದ ಸಂಗೀತ ಬಳಕೆ
  • ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ದಾಖಲಿಸಿದ ಸನ್ ಟಿವಿ ನೆಟ್‌ವರ್ಕ್
  • ಲೀಗಲ್ ನೋಟಿಸ್​ ನೀಡುತ್ತಿದ್ದಂತೆ ವಿಡಿಯೋ ಡಿಲೀಟ್​ ಮಾಡಿದ ಸಿಎಸ್​ಕೆ
ಚೆನ್ನೈ: ಐಪಿಎಲ್​ನ ಖ್ಯಾತ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings), ತಂಡದ ಪ್ರಚಾರ ಅಭಿಯಾನದಲ್ಲಿ ಅನುಮತಿಯಿಲ್ಲದೆ ತನ್ನ ಚಲನಚಿತ್ರಗಳ ಸಂಗೀತವನ್ನು ಬಳಸಿಕೊಂಡಿದೆ ಎಂದು ಆರೋಪಿಸಿ ಸನ್ ಟಿವಿ ನೆಟ್‌ವರ್ಕ್, ಸಿಎಸ್​ಕೆ ತಂಡದ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ವಿವಾದಕ್ಕೆ ಕಾರಣವೇನು?

ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ, ಸಿಎಸ್‌ಕೆ ತಂಡ ತನ್ನ ಹೊಸ ಜೆರ್ಸಿಯನ್ನು ಅದ್ಧೂರಿಯಾಗಿ ಅನಾವರಣಗೊಳಿಸಿತ್ತು. ಈ ಪ್ರಚಾರದ ವೀಡಿಯೊದಲ್ಲಿ ಸಿಎಸ್‌ಕೆ ತನ್ನ ತಂಡದ ಅದ್ದೂರಿತನವನ್ನು ತೋರಿಸಲು ರಜನಿಕಾಂತ್ ಅವರ ಜೈಲರ್, ಜೈಲರ್ 2 ಮತ್ತು ಕೂಲಿ ಸಿನಿಮಾಗಳ ಫೇಮಸ್ ಆಡಿಯೋ ಟ್ರ್ಯಾಕ್‌ಗಳು, ಹಿನ್ನೆಲೆ ಸಂಗೀತ ಮತ್ತು ಜನಪ್ರಿಯ ಸಂಭಾಷಣೆಗಳನ್ನು ಬಳಸಿಕೊಂಡಿತ್ತು. ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಕೂಡಲೇ ಅಭಿಮಾನಿಗಳು ಸಂಗೀತ ಮತ್ತು ಡೈಲಾಗ್‌ಗಳನ್ನು ಗುರುತಿಸಿ ಸಂಭ್ರಮಿಸಿದ್ದರು. ಆದರೆ, ಇದು ಸನ್ ಟಿವಿ ನೆಟ್‌ವರ್ಕ್‌ಗೆ ಅಸಮಾಧಾನ ತಂದಿತ್ತು.
ನಮ್ಮ ಯಾವುದೇ ಅನುಮತಿ ಪಡೆದಿಲ್ಲ!
ಸನ್ ಟಿವಿ ನೆಟ್‌ವರ್ಕ್ ಪ್ರಕಾರ, ತಮ್ಮ ನಿರ್ಮಾಣದ ಸಿನಿಮಾಗಳ ಸಂಗೀತ ಮತ್ತು ಸಂಭಾಷಣೆಗಳನ್ನು ಬಳಸಲು ಸಿಎಸ್‌ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ಪ್ರದರ್ಶಿಸಲಾದ ಜೆರ್ಸಿಯನ್ನು 2,399 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಇದು ಸ್ಪಷ್ಟವಾಗಿ ವಾಣಿಜ್ಯ ಉದ್ದೇಶದ ಬಳಕೆಯಾಗಿದೆ ಎಂದು ಕಂಪನಿ ವಾದಿಸಿದೆ.

ತಕ್ಷಣ ಎಚ್ಚೆತ್ತುಕೊಂಡ ಸಿಎಸ್‌ಕೆ

ಲೀಗಲ್​ ನೋಟಿಸ್ ತಲುಪಿದ ಬೆನ್ನಲ್ಲೇ, ಸಿಎಸ್‌ಕೆ ತಂಡ ತಕ್ಷಣವೇ ಎಚ್ಚೆತ್ತುಕೊಂಡಿತು. ಸೋಷಿಯಲ್ ಮೀಡಿಯಾದಿಂದ ಆ ವಿವಾದಿತ ವೀಡಿಯೊವನ್ನು ತೆಗೆದುಹಾಕಿದ ಫ್ರಾಂಚೈಸಿ, ಬಳಿಕ ಬೇರೆ ಹಿನ್ನೆಲೆ ಸಂಗೀತದೊಂದಿಗೆ ಪರಿಷ್ಕೃತ ಆವೃತ್ತಿಯನ್ನು ಅಪ್‌ಲೋಡ್ ಮಾಡಿದೆ.

ನ್ಯಾಯಾಲಯದಲ್ಲಿ ಏನಾಯಿತು?

ಮಾರ್ಚ್ 13 ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಸನ್ ಟಿವಿ ನೆಟ್‌ವರ್ಕ್ ಪರ ಹಿರಿಯ ವಕೀಲ ಜೆ. ರವೀಂದ್ರನ್, ನೋಟಿಸ್ ಸಿಕ್ಕಿದ ತಕ್ಷಣ ಸಿಎಸ್‌ಕೆ ವಿವಾದಿತ ವಿಷಯಗಳನ್ನು ಬಳಸುವುದನ್ನು ನಿಲ್ಲಿಸಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಸನ್ ಟಿವಿ ನೆಟ್‌ವರ್ಕ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ತಮ್ಮ ಒಪ್ಪಂದದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತಮ್ಮ ಹಕ್ಕನ್ನು ಸಮರ್ಥಿಸಿಕೊಂಡಿದೆ.
ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಎಸ್‌ಕೆ ನೋಟಿಸ್ ಬಂದ ನಂತರ ವಿಡಿಯೋ ತೆಗೆದುಹಾಕಿದ್ದನ್ನು ಗಮನಿಸಿದೆ. ಆದರೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿದೆ. ಮುಂದಿನ ದಿನಗಳಲ್ಲಿ ದಂಡ ವಿಧಿಸಬೇಕೇ ಅಥವಾ ಈ ಪ್ರಕರಣವನ್ನು ಹೇಗೆ ಮುಂದುವರಿಸಬೇಕೆಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net