ಮದುವೆಯ ಹೆಸರಿನಲ್ಲಿ ಎನ್​ಆರ್​ಐಗೆ 9.5 ಕೋಟಿ ರೂ. ಪಂಗನಾಮ: ನಟಿ ಆಶು ರೆಡ್ಡಿ ಆಡಿಯೋ ಕಾಲ್​ ಸೋರಿಕೆ​! Ashu Reddy Call Leak

ಮದುವೆಯ ಹೆಸರಿನಲ್ಲಿ ಎನ್​ಆರ್​ಐಗೆ 9.5 ಕೋಟಿ ರೂ. ಪಂಗನಾಮ: ನಟಿ ಆಶು ರೆಡ್ಡಿ ಆಡಿಯೋ ಕಾಲ್​ ಸೋರಿಕೆ​! Ashu Reddy Call Leak
ಮದುವೆಯ ಹೆಸರಿನಲ್ಲಿ ಎನ್​ಆರ್​ಐಗೆ 9.5 ಕೋಟಿ ರೂ. ಪಂಗನಾಮ: ನಟಿ ಆಶು ರೆಡ್ಡಿ ಆಡಿಯೋ ಕಾಲ್​ ಸೋರಿಕೆ​! Ashu Reddy Call Leak
Published on

ಪ್ರಮುಖ ಮುಖ್ಯಾಂಶಗಳು

  • ಸಮಂತಾರನ್ನೇ ಹೋಲುವ ಆಶು ರೆಡ್ಡಿ ಟಾಲಿವುಡ್​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಫೇಮಸ್​
  • ಆಗಾಗ ಬೋಲ್ಡ್​ ಅವತಾರವನ್ನು ತಾಳುವ ಮೂಲಕ ವಿವಾದಕ್ಕೆ ಗುರಿಯಾಗುವ ಆಶು ರೆಡ್ಡಿ
  • ಇದೀಗ ಆಶು ರೆಡ್ಡಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಹಣಕಾಸು ವಂಚಿಸಿದ ಆರೋಪ ಕೇಳಿಬಂದಿದೆ
  • ವಂಚನೆ ಆರೋಪದ ಬೆನ್ನಲ್ಲೇ ಆಶು ರೆಡ್ಡಿ ಅವರ ಆಡಿಯೋ ಕಾಲ್​ ಸೋರಿಕೆಯಾಗಿದೆ
Ashu Reddy Call Leak : ಮದುವೆಯ ಹೆಸರಿನಲ್ಲಿ ಅನಿವಾಸಿ ಭಾರತೀಯ ವೈ.ವಿ. ಧರ್ಮೇಂದ್ರ ಅವರಿಗೆ 9.5 ಕೋಟಿ ರೂ. ವಂಚನೆ ಮಾಡಿದ ಆರೋಪ ಹೊತ್ತಿರುವ ನಟಿ ಆಶು ರೆಡ್ಡಿ ಪ್ರಕರಣದಲ್ಲಿ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದರೂ, ಇತ್ತೀಚೆಗೆ ಆಶು ರೆಡ್ಡಿಗೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ಗಳು ಸೋರಿಕೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಕಾಲ್​ ರೆಕಾರ್ಡಿಂಗ್‌ಗಳಲ್ಲಿ ಆಶು ರೆಡ್ಡಿ, ಧರ್ಮೇಂದ್ರ ಅವರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
ಧರ್ಮೇಂದ್ರ ಅವರಿಂದ ಪಡೆದುಕೊಂಡ ಹಣದಲ್ಲಿ ಕೇವಲ ಒಂದೂವರೆ ಕೋಟಿ ರೂಪಾಯಿಗಳನ್ನು ಮಾತ್ರ ಸದ್ಯಕ್ಕೆ ನೀಡುವುದಾಗಿಯೂ, ಉಳಿದ ಹಣವನ್ನು ತಾನು ಜೀವನದಲ್ಲಿ ನೆಲೆಸಿದ ನಂತರ ಪಾವತಿಸುವುದಾಗಿ ಆಶು ರೆಡ್ಡಿ ಹೇಳಿರುವುದು ಸೋರಿಕೆಯಾಗಿರುವ ಆಡಿಯೋದಲ್ಲಿದೆ. ಒಂದು ವೇಳೆ ತನ್ನ ಮಾತನ್ನು ಕೇಳದಿದ್ದರೆ ಕಿರುಕುಳ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾಳೆ. ನನ್ನ ಅನುಮತಿಯಿಲ್ಲದೆ ಮನೆಗೆ ಬಂದು ಹೆತ್ತವರಿಗೆ ತೊಂದರೆ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡುವುದಾಗಿ ಆಶು ರೆಡ್ಡಿ ಬೆದರಿಕೆ ಹಾಕಿರುವುದು ಸೋರಿಕೆಯಾಗಿರುವ ಆಡಿಯೋದಲ್ಲಿದೆ.
ಮೇ ವರೆಗೆ ಸಮಯ ಕೊಟ್ಟರೆ ನಿನಗೆ ಒಂದು ಕೋಟಿ ರೂಪಾಯಿ ಕೊಡುತ್ತೇನೆ. ಉಳಿದ ಹಣವನ್ನು ನಾನು ಜೀವನದಲ್ಲಿ ಸೆಟಲ್ ಆದ ನಂತರ ಕೊಡುತ್ತೇನೆ. ನಾನು ಹೇಳುವುದನ್ನು ನೀನು ಕೇಳಿದರೆ ಒಳ್ಳೆಯದು, ಇಲ್ಲದಿದ್ದರೆ ನಿನಗೆ ತೊಂದರೆ ಕೊಡುತ್ತೇನೆ. ನೀನು ನನ್ನ ಅನುಮತಿಯಿಲ್ಲದೆ ನನ್ನ ಮನೆಗೆ ಬಂದು ನನ್ನ ತಂಗಿ ಮತ್ತು ನನ್ನ ಹೆತ್ತವರಿಗೆ ತೊಂದರೆ ಕೊಟ್ಟರೆ, ನಾನು ಕೇಸ್ ಹಾಕುತ್ತೇನೆ. ನಾನು ಹೇಳುವುದನ್ನು ನೀನು ಕೇಳುವುದಿಲ್ಲವೇ? ಹಿರಿಯರ ನಡುವೆ ಒಪ್ಪಂದ ಮಾಡಿಕೊಳ್ಳೋಣ. ವೇಣು ಸ್ವಾಮಿಯಂತಹ ದೊಡ್ಡ ವ್ಯಕ್ತಿಗಳ ಸಮ್ಮುಖದಲ್ಲಿ ರಾಜಿ ಮಾಡಿಕೊಳ್ಳೋಣ. ವಾಸ್ತವವಾಗಿ, ನಾನು ನಿನ್ನ ಮುಖ ನೋಡಲೂ ಬಯಸುವುದಿಲ್ಲ. ಅಷ್ಟೇ ಅಲ್ಲ, ಈ ವಿಷಯದ ಬಗ್ಗೆ ಮಾತನಾಡಲು ಕೂಡ ಬಯಸುವುದಿಲ್ಲ. ಏನಾದರೂ ಇದ್ದರೆ, ಅದನ್ನು ಬಗೆಹರಿಸೋಣ ಎಂದು ಆಶು ರೆಡ್ಡಿ ಬೆದರಿಕೆ ಹಾಕಿದ್ದಾರೆ. ಸದ್ಯ ಆಶು ರೆಡ್ಡಿ ಕಾಲ್​ ರೆಕಾರ್ಡಿಂಗ್​ ಸೋರಿಕೆಯಾಗಿರುವುದು ಟಾಲಿವುಡ್​ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ಆಶು ರೆಡ್ಡಿ ವಿರುದ್ಧ ದಾಖಲಾಗಿರುವ ಎಫ್​ಐಆರ್​ನಲ್ಲಿ ಏನಿದೆ?

ಎಫ್​ಐಆರ್​ನಲ್ಲಿರುವ ಮಾಹಿತಿಯ ಪ್ರಕಾರ, ದೂರುದಾರರ ಮಗ ವೈ.ವಿ. ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, 2018ರಲ್ಲಿ ಭಾರತಕ್ಕೆ ಬಂದಿದ್ದಾಗ ಪರಿಚಯಸ್ಥರ ಮೂಲಕ ಆಶು ರೆಡ್ಡಿ ಅವರನ್ನು ಭೇಟಿಯಾಗಿದ್ದರು. ತಾನು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ನಟಿ ಎಂದು ಪರಿಚಯಿಸಿಕೊಂಡ ಆಶು ರೆಡ್ಡಿ, ಕೇವಲ ಎರಡು ತಿಂಗಳಲ್ಲೇ ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿದರು. ನನಗೆ ಈ ಮೊದಲೇ ಮದುವೆಯಾಗಿದ್ದು ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ಧರ್ಮೇಂದ್ರ ಅವರು ಸ್ಪಷ್ಟಪಡಿಸಿದರು ಕೂಡ ಆಶು ರೆಡ್ಡಿ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಂಡ ನಂತರ, ತಮಗೆ ಎಚ್‌-1ಬಿ (H1B) ವೀಸಾದಲ್ಲಿ ಸಮಸ್ಯೆಯಿದೆ ಎಂದು ತಿಳಿಸಿದ ಆಶು ರೆಡ್ಡಿ, ತಮಗೆ ಇನ್ನು ಮುಂದೆ ಓದು ಮುಂದುವರಿಸಲು ಆಸಕ್ತಿಯಿಲ್ಲ ಎಂಬ ಸಂಗತಿಯನ್ನು ಧರ್ಮೇಂದ್ರ ಅವರ ಬಳಿ ಒಪ್ಪಿಕೊಂಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆಕೆ ತನ್ನ ಶಿಕ್ಷಣ ಸಾಲ ಬಾಕಿ ಇರುವುದಾಗಿ ಮತ್ತು ತಂದೆಯಿಂದ ಆರ್ಥಿಕ ನೆರವು ನಿಂತುಹೋಗಿದೆ ಎಂದು ಧರ್ಮೇಂದ್ರಗೆ ಹೇಳಿದ್ದಳು. ತನಗೆ ನಟನೆಯಲ್ಲಿ ಆಸಕ್ತಿಯಿದ್ದು, ಭಾರತಕ್ಕೆ ಮರಳಿ ವೃತ್ತಿ ಜೀವನ ಆರಂಭಿಸಲು ಆರ್ಥಿಕ ಸಹಾಯ ಮಾಡುವಂತೆ ಧರ್ಮೇಂದ್ರನ ಬಳಿ ನೆರವು ಕೋರಿದ್ದಳು. ಇದೇ ವೇಳೆ, ಆತನನ್ನು ಮದುವೆಯಾಗುವುದಾಗಿ ಪದೇ ಪದೇ ಭರವಸೆ ನೀಡಿದ್ದರಿಂದ, ಆತ ಅವಳನ್ನು ಸಂಪೂರ್ಣವಾಗಿ ನಂಬಿ, ಆಕೆಯ ಎಲ್ಲಾ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮುಂದಾದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಮದುವೆಗೆ ತನ್ನ ತಂದೆಯ ಒಪ್ಪಿಗೆ ಪಡೆಯಲು ಐಷಾರಾಮಿ ಜೀವನಶೈಲಿ ಅಗತ್ಯವೆಂದು ನಂಬಿಸಿ, ಕಳೆದ ಎರಡು ವರ್ಷಗಳಿಂದ ಮಾಸಿಕ ಖರ್ಚು, ಕಾರುಗಳು, ಚಿನ್ನ ಹಾಗೂ ತನ್ನ ಹೆಸರಿಗೆ ಆಸ್ತಿಗಳನ್ನು ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ಜುಲೈ 2020ರಲ್ಲಿ ಮದುವೆಯ ಮಾತುಕತೆ ನಡೆಸಲು ಮುಂದಾದಾಗ ಯಾವುದೇ ಸರಿಯಾದ ಕಾರಣ ನೀಡದೆ ಮದುವೆಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೊಂದ ವ್ಯಕ್ತಿಯು ತಾನು ನೀಡಿದ್ದ ಹಣ ಮತ್ತು ಚಿನ್ನಾಭರಣಗಳನ್ನು ಮರಳಿ ನೀಡುವಂತೆ ಆಶು ರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಶು ರೆಡ್ಡಿಗೆ ನೀಡಿದ್ದ ಹಣ ಮತ್ತು ಆಸ್ತಿಯನ್ನು ಹಿಂತಿರುಗಿಸುವಂತೆ ಧರ್ಮೇಂದ್ರ ಅವರು ಕೇಳಿದಾಗ, ಆಕೆ ಸರಿಯಾಗಿ ಪ್ರತಿಕ್ರಿಯಿಸದೆ ತಪ್ಪಿಸಿಕೊಳ್ಳುತ್ತಿದ್ದಳು. ಈ ವಿವಾದವನ್ನು ಬಗೆಹರಿಸಲು ಟಾಲಿವುಡ್ ನಟಿ ಹೇಮಾ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ, ಆಶು ರೆಡ್ಡಿ 70 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಲು ಒಪ್ಪಿ, ಅದರ ಭರವಸೆಯಾಗಿ ಖಾಲಿ ಚೆಕ್‌ಗಳನ್ನು ನೀಡಿದ್ದರು. ಆದರೆ, ನಂತರ ಹೇಮಾ ಅವರಿಂದ ಆ ಚೆಕ್‌ಗಳನ್ನು ಪಡೆದು ಹರಿದು ಹಾಕುವ ಮೂಲಕ ಸಾಕ್ಷ್ಯನಾಶಪಡಿಸಿದ ಅಶು ರೆಡ್ಡಿ, ಹಣವನ್ನು ಮಾತ್ರ ಹಿಂತಿರುಗಿಸಲಿಲ್ಲ. ಇದಾದ ಬಳಿಕ ನವೆಂಬರ್ 2020 ರಲ್ಲಿ, ಆಶು ರೆಡ್ಡಿ ಅವರ ಸಹೋದರಿ ದಿವ್ಯಾ ರೆಡ್ಡಿ ಮತ್ತು ತಾಯಿ ಯಶೋದಾ ರೆಡ್ಡಿ ಅವರು ಧರ್ಮೇಂದ್ರರನ್ನು ಸಂಪರ್ಕಿಸಿ, ಬ್ರೇಕ್‌ಅಪ್ ನಂತರ ಆಶು ರೆಡ್ಡಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ತಿಳಿಸಿದ್ದರು.

ಆಶು ರೆಡ್ಡಿ ಕುಟುಂಬ ಹೇಳಿದ್ದೇನು?

ಆಶು ರೆಡ್ಡಿ ಅವರು ಖಿನ್ನತೆಯಿಂದ ಬಳಲುತ್ತಿದ್ದಾಳೆ ಮತ್ತು ಧರ್ಮೇಂದ್ರನಿಂದ ಮಾತ್ರ ಆಕೆ ಸಹಜ ಸ್ಥಿತಿಗೆ ಮರಳಲು ಸಾಧ್ಯ ಎಂದು ಆಶು ರೆಡ್ಡಿ ಕುಟುಂಬ ನಂಬಿಸಿತ್ತು. ಅಲ್ಲದೆ, ಹಣಕಾಸಿನ ವಿವಾದಗಳನ್ನು ಮರೆತು ಸಂಬಂಧವನ್ನು ಮುಂದುವರಿಸುವಂತೆ ಹಾಗೂ ಮದುವೆಯಾಗುವ ಭರವಸೆಯನ್ನು ಕುಟುಂಬ ನೀಡಿತ್ತು. ಇದನ್ನು ನಂಬಿದ ಧರ್ಮೇಂದ್ರ 2020 ರಿಂದ ಮತ್ತೆ ಆಕೆಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದರು. ಮದುವೆಯ ಮಾತುಕತೆಗಾಗಿ ದೂರುದಾರರು ಆಶು ರೆಡ್ಡಿ ಅವರ ತಂದೆ ವೆಂಕಟ ಕೃಷ್ಣ ಕೊಯ್ಯ ಅವರನ್ನು ಭೇಟಿಯಾದಾಗ, ಅವರು ಕೂಡ ಮದುವೆಗೆ ಸಮ್ಮತಿ ಸೂಚಿಸಿ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಮದುವೆಯ ಪ್ರಕ್ರಿಯೆಯನ್ನು ಮತ್ತಷ್ಟು ನಂಬಿಸಲು, ಆಶು ರೆಡ್ಡಿ ಅವರು ಅಕ್ಟೋಬರ್ 2024ರಲ್ಲಿ ಜ್ಯೋತಿಷಿ ವೇಣು ಸ್ವಾಮಿ ಅವರ ಬಳಿ ಜಾತಕ ಹೊಂದಾಣಿಕೆಯನ್ನು ಕೂಡ ಪರಿಶೀಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ದೂರುದಾರರು ಮತ್ತು ಅವರ ಮಗ ಧರ್ಮೇಂದ್ರ ಮದುವೆ ನಡೆಯುವುದು ಖಚಿತ ಎಂದು ನಂಬಿ ದೊಡ್ಡ ಮಟ್ಟದ ಹಣಕಾಸು ವರ್ಗಾವಣೆಗಳನ್ನು ಮಾಡಿದ್ದರು. ಆದರೆ 2020 ರಿಂದ 2025 ರವರೆಗೆ ವಿವಿಧ ಕಾರಣಗಳನ್ನು ನೀಡಿ ಮದುವೆಯನ್ನು ಮುಂದೂಡುತ್ತಾ, ಆಶು ರೆಡ್ಡಿ ಮತ್ತು ಅವರ ಕುಟುಂಬದವರು ತಮ್ಮನ್ನು ನಂಬಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

9 ಕೋಟಿ ರೂ. ವಂಚನೆ

ಆಶು ರೆಡ್ಡಿ ಮತ್ತು ಅವರ ಕುಟುಂಬದ ವಿರುದ್ಧ ಸುಮಾರು 9.35 ಕೋಟಿ ರೂಪಾಯಿ ವಂಚನೆ ಮತ್ತು ಹನಿ ಟ್ರ್ಯಾಪ್ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ದೂರುದಾರ ಯೇನುಮುಲ ಸತ್ಯನಾರಾಯಣ ಮೂರ್ತಿ ಅವರ ಪ್ರಕಾರ, ಮದುವೆಯ ಆಮಿಷವೊಡ್ಡಿದ ಆಶು ರೆಡ್ಡಿ, ಕಳೆದ ಐದು ವರ್ಷಗಳಲ್ಲಿ ತಮ್ಮ ಮಗನಿಂದ 5 ಕೆಜಿ ಚಿನ್ನ, ಐಷಾರಾಮಿ ಕಾರುಗಳು ಮತ್ತು ಮಣಿಕೊಂಡದಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಸೇರಿದಂತೆ ಭಾರಿ ಮೊತ್ತದ ಹಣವನ್ನು ಪಡೆದಿದ್ದಾರೆ. ಆಶು ರೆಡ್ಡಿ ಕುಟುಂಬದವರು ಧರ್ಮೇಂದ್ರನನ್ನು "ಅಳಿಯ" ಎಂದು ಸಂಬೋಧಿಸಿ ಆರ್ಥಿಕ ಸಹಾಯ ಪಡೆಯುತ್ತಿದ್ದರು ಆದರೆ, 2025ರಲ್ಲಿ ಮದುವೆಯಾಗಲು ನಿರಾಕರಿಸಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಂಚನೆಯಲ್ಲಿ ಆಶು ರೆಡ್ಡಿ ಅವರ ತಂದೆ, ಸಹೋದರಿ ಮತ್ತು ಆಕೆಯ ಪ್ರಿಯತಮ ಎನ್ನಲಾದ ನಮ್ಮಿ ಶಿವ ಜಯಂತ್ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆಯ ಸುಳ್ಳು ಭರವಸೆ ನೀಡಿ ಹಣದ ಆಸೆ ತೋರಿಸುವುದು, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ಯುವಕ ಈ ಘಟನೆಯಿಂದ ತೀವ್ರ ಹಣಕಾಸಿನ ನಷ್ಟ ಮತ್ತು ಮಾನಸಿಕ ಸಂಕಟಕ್ಕೆ ಒಳಗಾಗಿದ್ದು, ವಂಚನೆಯಿಂದ ಪಡೆದ ಆಸ್ತಿಗಳನ್ನು ಮರುಪಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ವಿನಂತಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net