ಸಾಲದ ಹಣ ಮರಳಿಸಲು ನಟಿ ಮುಸ್ಕಾನ್ ನಾಟಕ? ಅತ್ತಿಗೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಹನ್ಸಿಕಾ ಮೋಟ್ವಾನಿ! Hansika Motwani

ಅತ್ತಿಗೆ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಹನ್ಸಿಕಾ ಮೋಟ್ವಾನಿ
ಅತ್ತಿಗೆ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಹನ್ಸಿಕಾ ಮೋಟ್ವಾನಿ
Published on

ಪ್ರಮುಖ ಮುಖ್ಯಾಂಶಗಳು

  • ಕೌಟುಂಬಿಕ ಹಿಂಸೆ ಪ್ರಕರಣ
  • ಅತ್ತಿಗೆ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟಿ ಹನ್ಸಿಕಾ ಮೋಟ್ವಾನಿ
  • ಅತ್ತಿಗೆ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳೆಂದ ನಟಿ
ಮುಂಬೈ: ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ತಮ್ಮ ಸ್ವಂತ ಅತ್ತಿಗೆ ಕಿರುತೆರೆ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ಹನ್ಸಿಕಾ ಮತ್ತು ಅವರ ಅಣ್ಣ ಪ್ರಶಾಂತ್ ಮೋಟ್ವಾನಿ ವಿರುದ್ಧ ಕೌಟುಂಬಿಕ ಹಿಂಸೆಯ ಆರೋಪ ಮಾಡಿದ್ದ ಮುಸ್ಕಾನ್ ವಿರುದ್ಧ ಈಗ ಹನ್ಸಿಕಾ ಮುಂಬೈ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಏನಿದು 2 ಕೋಟಿ ರೂ. ಕಿರಿಕ್?

ತಮ್ಮ ಮೇಲೆ ಕೇಳಿಬಂದಿರುವ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ವಾದಿಸಿರುವ ಹನ್ಸಿಕಾ, ತಮ್ಮ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಮುಸ್ಕಾನ್ ಜೇಮ್ಸ್ ಅವರಿಂದ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ತಮ್ಮ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಮುಸ್ಕಾನ್ ಅವರಿಗೆ ತಡೆಯಾಜ್ಞೆ ನೀಡಬೇಕು ಮತ್ತು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸಾಲ ಮರುಪಾವತಿ ತಪ್ಪಿಸಲು ಸುಳ್ಳು ಆರೋಪ!
ಈ ಇಡೀ ವಿವಾದದ ಹಿಂದೆ ದೊಡ್ಡದೊಂದು ಹಣದ ವ್ಯವಹಾರವಿದೆ ಎಂಬುದು ಹನ್ಸಿಕಾ ಅವರ ವಾದ. ವಕೀಲ ಅದ್ನಾನ್ ಶೇಖ್ ಮೂಲಕ ಸಲ್ಲಿಕೆಯಾಗಿರುವ ಅರ್ಜಿಯ ಪ್ರಕಾರ, ಮುಸ್ಕಾನ್ ಅವರು ಹನ್ಸಿಕಾ ಅವರಿಂದ ಸುಮಾರು 27 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಪ್ರಶಾಂತ್ ಮತ್ತು ಮುಸ್ಕಾನ್ ಮದುವೆಯ ಸಂದರ್ಭದಲ್ಲಿ ಈ ಹಣವನ್ನು ನೀಡಲಾಗಿತ್ತು. ಆದರೆ, ಪದೇ ಪದೇ ಕೇಳಿದರೂ ಮುಸ್ಕಾನ್ ಸಾಲ ತೀರಿಸಿಲ್ಲ. ಈ ಹಣವನ್ನು ಮರುಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಲು ಮುಸ್ಕಾನ್ ಈಗ ಹನ್ಸಿಕಾ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆಯ ನಾಟಕವಾಡುತ್ತಿದ್ದಾರೆ ಎಂದು ಹನ್ಸಿಕಾ ಗಂಭೀರ ಆರೋಪ ಮಾಡಿದ್ದಾರೆ.

ಹನ್ಸಿಕಾ ಹೇಳುವುದೇನು?

ನಾನು ನನ್ನ ಅಣ್ಣನ ಮದುವೆಯಲ್ಲಿ ಕೇವಲ ಅತಿಥಿಯಂತೆ ಭಾಗವಹಿಸಿದ್ದೆ. ಅಣ್ಣ ಮತ್ತು ಅತ್ತಿಗೆಯ ವೈಯಕ್ತಿಕ ಜೀವನದಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡಿಲ್ಲ. ಅವರ ದಾಂಪತ್ಯ ಹದಗೆಟ್ಟಾಗಲೂ ನಾನು ಅವರೊಂದಿಗೆ ವಾಸಿಸುತ್ತಿರಲಿಲ್ಲ. 2022 ರಲ್ಲಿ ನನ್ನ ಮದುವೆಯಾದ ಮೇಲಂತೂ ನಾನು ನನ್ನ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಹಾಗಿರುವಾಗ, ಅವರ ಮನೆಯಲ್ಲಿ ನಡೆಯುವ ವಿಷಯಗಳಿಗೆ ನಾನು ಹೇಗೆ ಜವಾಬ್ದಾರಳಾಗುತ್ತೇನೆ? ಎಂದು ಹನ್ಸಿಕಾ ಪ್ರಶ್ನಿಸಿದ್ದಾರೆ.

ಮುಸ್ಕಾನ್ ಮಾಡಿರುವ ಆರೋಪಗಳೇನು?

ಈ ಹಿಂದೆ ಮುಸ್ಕಾನ್ ಜೇಮ್ಸ್ ಅವರು ಹನ್ಸಿಕಾ ಮತ್ತು ಪ್ರಶಾಂತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮದುವೆಯಲ್ಲಿ ತಮಗೆ ಕಿರುಕುಳ ನೀಡಲಾಗಿದೆ, ದುಬಾರಿ ಉಡುಗೊರೆಗಳಿಗಾಗಿ ಪೀಡಿಸಲಾಗಿದೆ ಮತ್ತು ಹನ್ಸಿಕಾ ದಂಪತಿಗಳ ಜೀವನದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮುಸ್ಕಾನ್ ದೂರಿದ್ದರು. ಈ ಕೌಟುಂಬಿಕ ಒತ್ತಡದಿಂದಾಗಿಯೇ ತಮಗೆ ಬೆಲ್ಸ್ ಪಾರ್ಶ್ವವಾಯು (Bell's Palsy) ಕಾಣಿಸಿಕೊಂಡಿದೆ ಎಂದು ಅವರು ನೋವು ತೋಡಿಕೊಂಡಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net