ತೆಲುಗು ನಟ ನಾನಿ ಅಭಿನಯದ ‘ದ ಪ್ಯಾರಡೈಸ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದೇ ಸೆಪ್ಟೆಂಬರ್ 24ಕ್ಕೆ ತೆರೆಗೆ ಬರಲಿದೆ. ಈಗಾಗಲೇ ‘ಆಯಾ ಶೇರ್’ ಹಾಡಿನ ಮೂಲಕ ಸದ್ದು ಮಾಡಿದ್ದ ಚಿತ್ರತಂಡ ಇದೀಗ ‘ಯೇಷನಗುಲಾ’ ಎಂಬ ಶೀರ್ಷಿಕೆಯ ಎರಡನೇ ಹಾಡು ಅನಾವರಣಗೊಳಿಸಿದೆ. ಹಾಡಿನಲ್ಲಿ ನಾನಿ ಜತೆ ಬಹುಭಾಷಾ ತಾರೆ ಕೀರ್ತಿ ಸುರೇಶ್ ಕುಣಿದು ಕುಪ್ಪಳಿಸಿದ್ದಾರೆ. ಆ ಮೂಲಕ ‘ದ ಪ್ಯಾರಡೈಸ್’ ಅಂಗಳದಲ್ಲಿ ‘ಮಹಾನಟಿ’ ಮಿಂಚಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನೀಡಿರುವ ಈ ಹಾಡನ್ನು ಕಸರ್ಲಾ ಶ್ಯಾಮ್ ರಚಿಸಿದ್ದು, ಪ್ರಭಾ ಬಂಗಾರಿಗಲ್ಲ ಮತ್ತು ಜಂಗೀರೆಡ್ಡಿ ಧ್ವನಿಯಾಗಿದ್ದಾರೆ. ಜಾನಪದ ಸ್ಪರ್ಶವಿರುವ ಹಾಡಿನಲ್ಲಿ ನಾನಿ ಜತೆ ಕೀರ್ತಿ ಸುರೇಶ್ ಎನರ್ಜಿಟಿಕ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ‘ದಸರಾ’ದಲ್ಲಿ ಕೀರ್ತಿ ಸುರೇಶ್, ನಾನಿಗೆ ನಾಯಕಿಯಾಗಿದ್ದರು. ಇದೀಗ ‘ದ ಪ್ಯಾರಡೈಸ್’ನಲ್ಲಿ ಮೊದಲ ಬಾರಿಗೆ ನಟಿ ತಮ್ಮದಲ್ಲದ ಬೇರೆ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ಡಾನ್ಸ್ ಮಾಡಿರುವುದು ವಿಶೇಷ. ರಿಲೀಸ್ ಆದ ಒಂದೇ ದಿನಕ್ಕೆ ಈ ಹಾಡು 2 ಕೋಟಿ 30 ಲಕ್ಷ ವೀಕ್ಷಣೆ ಕಂಡಿದ್ದು, ಕೀರ್ತಿ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆ ಬೆನ್ನಲ್ಲೇ ನಟಿ ಪ್ರತಿಕ್ರಿಯಿಸಿದ್ದು, ‘ನಾನಿ ಜಡೆ ಮುಟ್ಟಿಸಿದರೆ ಸಾಕು ಕೆಂಡವಾಗಿ ಬಿಡುತ್ತಾನೆ’ ಎಂದು ನಾನಿ ಕಾಲೆಳೆದಿದ್ದಾರೆ. ಉಳಿದಂತೆ, ತಮಿಳಿನ ‘ಡೊರೊಥಿ’, ‘ಕನ್ನಿವೇದಿ’, ‘ಸತ್ಯವಾನ್ ಸಾವಿತ್ರಿ’, ತೆಲುಗಿನ ‘ರೌಡಿ ಜನಾರ್ದನ’, ‘ಜನವರಿ 12 ವಿಡುದಲ’ ಸೇರಿ ಇನ್ನೂ ಹೆಸರಿಡದ ಎರಡು ಚಿತ್ರಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. -ಏಜೆನ್ಸೀಸ್