ಎಪ್ಪತ್ತರಲ್ಲಿ ಇಪ್ಪತ್ತರ ಉತ್ಸಾಹ : ತೆಲುಗು ನಟ ಚಿರಂಜೀವಿ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಉಡುಗೊರೆ

chiranjeevi (1)
Published on

ತೆಲುಗಿನ ಜನಪ್ರಿಯ ನಟ ಚಿರಂಜೀವಿ ಶುಕ್ರವಾರ (ಆ.22) 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್ ಮೆಗಾಸ್ಟಾರ್ ಎಂದೇ ಖ್ಯಾತಿಯಾಗಿರುವ ಚಿರಂಜೀವಿ ಹುಟ್ಟುಹಬ್ಬಕ್ಕೆ ಮೂರು ಸಿನಿಮಾಗಳ ಅಪ್‌ಡೇಟ್ ಸಿಕ್ಕಿದೆ. ‘ವಿಶ್ವಂಭರ’ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದ್ದು, ಎರಡು ಹೊಸ ಸಿನಿಮಾಗಳು ಘೋಷಣೆಯಾಗಿವೆ. ಫ್ಯಾಂಟಸಿ, ಆ್ಯಕ್ಷನ್ ಜಾನರ್‌ನ ‘ವಿಶ್ವಂಭರ’ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತರಲು ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಇನ್ನು, ಚಿರು ಬರ್ತ್‌ಡೇಗೆ ‘ವಿಶ್ವಂಭರ’ ತಂಡ ವಿಶೇಷ ಮಾಸ್ ಆ್ಯಕ್ಷನ್ ಟೀಸರ್ ಬಿಡುಗಡೆ ಮಾಡಿದೆ. ಇಲ್ಲಿ ಚಿರಂಜೀವಿ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದ ಬೇಸಗೆ ರಜೆಗೆ ಸಿನಿಮಾ ಬಿಡುಗಡೆಯಾಗಲಿದೆ.

ಮೆಗಾ 157 ಘೋಷಣೆ: ‘ಎಫ್​ 2’, ‘ಎಫ್ 3’, ‘ಸಂಕ್ರಾಂತಿಕಿ ವಸ್ತುನ್ನಾಮ್’ ನಿರ್ದೇಶಕ ಅನಿಲ್ ರವಿಪುಡಿ, ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿತ್ತು. ಇದೀಗ ಚಿರು ಹುಟ್ಟುಹಬ್ಬಕ್ಕೆ ಸಿನಿಮಾ ಟೈಟಲ್ ಘೋಷಣೆಯಾಗಿದ್ದು, ‘ಮನ ಶಂಕರ ವರಪ್ರಸಾದಗಾರು’ ಎಂದು ಶೀರ್ಷಿಕೆ ಇಡಲಾಗಿದೆ. ಇದು ಚಿರಂಜೀವಿ ಅಭಿನಯದ 157ನೇ ಚಿತ್ರ. ಇಲ್ಲಿ ಚಿರುಗೆ ನಯನತಾರಾ ಜೋಡಿಯಾಗಿದ್ದಾರೆ.

ಕೆವಿಎನ್ ಜತೆ ಕೈಜೋಡಿಸಿದ ಚಿರು: ‘ಸಖತ್’, ‘ಕೆಡಿ: ದ ಡೆವಿಲ್’ ನಿರ್ಮಿಸಿರುವ ಕೆವಿಎನ್ ಸಂಸ್ಥೆ ಈಗಾಗಲೇ ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಪರಿಚಯವಾಗಿದೆ. ಇದರ ಬೆನ್ನಲ್ಲೇ, ಚಿರಂಜೀವಿ ಹೊಸ ಚಿತ್ರವನ್ನು ನಿರ್ಮಿಸುವ ಮೂಲಕ ಟಾಲಿವುಡ್‌ಗೂ ಎಂಟ್ರಿ ನೀಡುತ್ತಿದೆ. ಚಿರು ಬರ್ತ್‌ಡೇ ದಿನವೇ ಕೆವಿನ್ ಜತೆಗಿನ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರವನ್ನು ಬಾಬಿ ಕೊಲ್ಲಿ ಅಲಿಯಾಸ್ ಕೆ.ಎಸ್. ರವೀಂದ್ರ ನಿರ್ದೇಶಿಸಲಿದ್ದಾರೆ. ‘ವಾಲ್ಟರ್ ವೀರಯ್ಯ’ ಬಳಿಕ ಚಿರು ಮತ್ತು ಬಾಬಿ ಹೊಸ ಸಿನಿಮಾದಲ್ಲಿ ಮತ್ತೆ ಒಂದಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net