

ಬೆಂಗಳೂರು: ಇಂದು ಅಂಬರೀಷ್ ಅವರ ಹುಟ್ಟುಹಬ್ಬ. ಅವರಿಲ್ಲದ ಮೂರನೇ ಹುಟ್ಟುಹಬ್ಬ. ಬಹುಶಃ ಲಾಕ್ಡೌನ್ ಇಲ್ಲದಿದ್ದರೆ, ಅವರ ಪುಣ್ಯಭೂಮಿಯ ಎದುರು ಅಭಿಮಾನಿಗಳು, ದೊಡ್ಡ ಸಂಭ್ರಮಾಚರಣೆ ಮಾಡುತ್ತಿದ್ದರೋ ಏನೋ? ಆದರೆ, ಕಳೆದ ವರ್ಷದಂತೆ ಈ ವರ್ಷ ಸಹ ಲಾಕ್ಡೌನ್ನಿಂದ ಆ ಸಂಭ್ರಮಾಚರಣೆ ರದ್ದಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅವರ ಪುಣ್ಯಭೂಮಿಯಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.
ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಗಳಲ್ಲಿ ಸುಮಲತಾ ಅಂಬರೀಷ್ ಸಹ ಭಾಗವಹಿಸಲಿದ್ದಾರೆ. ಪ್ರಮುಖವಾಗಿ, ಅಂಬರೀಷ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಅವರು ಭೇಟಿ ಕೊಡಲಿದ್ದಾರೆ. ಇನ್ನು, ಅಂಬರೀಷ್ ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮಗ ಅಭಿಷೇಕ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡದಿಂದ ಟೀಸರ್ ಅಥವಾ ಪೋಸ್ಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ, ಅಂಬರೀಷ್ ಅವರ ಹುಟ್ಟುಹಬ್ಬದ ದಿನವೇ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಘೋಷಣೆಯಾಗುವುದರ ಜತೆಗೆ, ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಅದರ ಹಿಂದಿನ ವರ್ಷ ಅಂಬರೀಷ್ ಹುಟ್ಟುಹಬ್ಬದ ಸಂದರ್ಭದಲ್ಲೇ, ಅಭಿಷೇಕ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ‘ಅಮರ್’ ಬಿಡುಗಡೆಯಾಗಿತ್ತು. ಹಾಗಾಗಿ, ಈ ಬಾರಿ ಸಹ ಏನಾದರೂ ವಿಶೇಷ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.