ನವರತ್ನಕ್ಕೆ ಇಂದು ಅದೃಷ್ಟ ಪರೀಕ್ಷೆ

NB 2
Published on

ಬೆಂಗಳೂರು: ‘ಆದಿ ಪುರಾಣ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಪಡೆದಿದ್ದ ನಟಿ ಮೋಕ್ಷ ಕುಶಾಲ್, ‘ನವರತ್ನ’ ಹಿಡಿದು ಆಗಮಿಸುತ್ತಿದ್ದಾರೆ. ಅಂದರೆ ‘ನವರತ್ನ’ ಶೀರ್ಷಿಕೆಯ ಸಿನಿಮಾ ಶುಕ್ರವಾರ (ಫೆ. 14) ಬಿಡುಗಡೆ ಆಗುತ್ತಿದೆ. ಅಂದಹಾಗೆ, ಈ ಚಿತ್ರ ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಮಂಡ್ಯ ಮೂಲದ ಪ್ರತಾಪ್ ರಾಜ್.

ಹಾಗಾದರೆ ಏನಿದು ‘ನವರತ್ನ’? ಎಂಬುದಕ್ಕೆ ಸಿಗುವ ವಿವರಣೆ ಇಷ್ಟು ಮಾತ್ರ. ‘ಇಡೀ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗಿದೆ. ಕಾಡಿನಲ್ಲಿ ಸಿನಿಮಾ ಸಾಗಲಿದ್ದು, ರತ್ನದ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಸಿನಿಮಾ ನೋಡಿಯೇ ಆ ರಹಸ್ಯ ತಿಳಿದುಕೊಳ್ಳಬೇಕು’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಚಿತ್ರದ ಬಗ್ಗೆ ಇಡೀ ತಂಡ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ. ‘ಒಂದೊಳ್ಳೆಯ ಪ್ರತಿಕ್ರಿಯೆ ಸಿಗಲಿದೆ’ ಎಂಬ ಆಶಾವಾದ ನಿರ್ದೇಶಕರದ್ದು. ಇನ್ನು ನಾಯಕಿಯಾಗಿ ನಟಿಸಿರುವ ಮೋಕ್ಷ ಕುಶಾಲ್​ಗೆ ಹೊಸ ರೀತಿಯ ಪಾತ್ರ ಪೋಷಣೆ ಮಾಡಿದ ಖುಷಿ ಇದೆ. ಈ ಚಿತ್ರದಲ್ಲಿ ಅವರು ವನ್ಯಜೀವಿ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಶೃಂಗೇರಿ ಸಮೀಪದ ಕಿಗ್ಗ ಬಳಿಯ ಕಾಡಿನಲ್ಲಿ ಕೆಲ ದಿನಗಳ ಚಿತ್ರೀಕರಣ ಮತ್ತು ಇಂಡೊನೇಷ್ಯಾದ ದಟ್ಟ ಕಾನನದಲ್ಲೂ ಶೂಟಿಂಗ್ ಮಾಡಲಾಗಿದೆ. ಹಾಡುಗಳ ಸನ್ನಿವೇಶಗಳು ಲಡಾಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸೆರೆಯಾಗಿವೆ.

ಪಿ.ಆರ್.ಫಿಲಮ್ ಸಿ.ಪಿ.ಚಂದ್ರಶೇಖರ್ ‘ನವರತ್ನ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವೆಂಗಿ ಸಂಗೀತ ನೀಡಿದ್ದಾರೆ. ಪ್ರವೀಣ್ ಪಾಲ್ ಹಿನ್ನೆಲೆ ಸಂಗೀತ, ರಿಜೊ ಪಿ. ಜಾನ್, ಲಕ್ಷ್ಮೀರಾಜ್ ಛಾಯಾಗ್ರಹಣ, ವಿಷ್ಣು ಸಂಕಲನ ಹಾಗೂ ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಬಲರಾಜ ವಾಡಿ, ಅಮಿತ್ ಬಿ. ರಾಜ್ ಮತ್ತಿತರರು ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net