ನಿರ್ಮಾಪಕರ ಹೆಸರೇ ಟೈಟಲ್

NB 1
Published on

ಬೆಂಗಳೂರು: ಕೆಲ ದಿನಗಳ ಹಿಂದೆ ರಿಲೀಸ್ ಆದ ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರ ನಿರ್ಮಾಣ ಮಾಡಿದ್ದು, ಸಿನಿಮಾಗಳಿಗೆ ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಸುಧೀರ್. ಈಗ ಮತ್ತೊಬ್ಬ ಮ್ಯಾನೇಜರ್ ಶಿವಾರ್ಜುನ್ ನಿರ್ವಪಕರಾಗಿದ್ದು, ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’ ಶೀರ್ಷಿಕೆಯನ್ನೇ ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡಿದ್ದಾರೆ.

ಶಿವರಾತ್ರಿಯಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ‘ಶಿವಾರ್ಜುನ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು. ‘ತಾರಾ ಅವರ ಕೋರಿಕೆ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಈ ಚಿತ್ರದ ನಿರ್ವಪಕರು ನನ್ನ ಕ್ಷೇತ್ರದ ಮತದಾರರು ಎನ್ನುವುದು ನನಗೆ ಬಹಳ ಸಂತಸದ ವಿಷಯ. ನಮಗೆ ಚಿಕ್ಕ ವಯಸ್ಸಿನಿಂದಲೂ ಅರ್ಜುನ್ ಸರ್ಜಾ ಅವರ ಕ್ರೇಜ್ ಬಹಳ ಇತ್ತು. ಅವರ ಮನೆ ಮಕ್ಕಳ ಚಿತ್ರವಿದು ಯಶಸ್ವಿಯಾಗಲಿ’ ಎಂದು ತೇಜಸ್ವಿ ಶುಭ ಕೋರಿದರು. ‘ತೆಲುಗಿನವರದ್ದು ನಮ್ಮಷ್ಟೇ ಜನಸಂಖ್ಯೆ, ಆದರೆ ಅವರ ಇಂಡಸ್ಟ್ರಿ ಬಹಳ ದೊಡ್ಡದು. ನಮ್ಮ ಜನ ಹೆಚ್ಚುಹೆಚ್ಚು ಕನ್ನಡ ಸಿನಿಮಾ ನೋಡಿ ನಮ್ಮ ಇಂಡಸ್ಟ್ರಿಯನ್ನು ಬೆಳೆಸಬೇಕು. ಇಂಡಸ್ಟ್ರಿಗೆ ಸಂಬಂಧಪಟ್ಟಂತೆ ಏನೇ ಕೆಲಸ ಆಗಬೇಕಿದ್ದರೂ ಒಂದು ಪಟ್ಟಿ ಮಾಡಿ ನನಗೆ ನೀಡಿದರೆ, ಅದು ಆಗುವಂತೆ ನೋಡಿಕೊಳ್ಳುತ್ತೇನೆ’ ಎಂದು ತೇಜಸ್ವಿ ಭರವಸೆ ನೀಡಿದರು. ನಾಯಕ ಚಿರಂಜೀವಿ ಸರ್ಜಾ ಪ್ರಕಾರ ಇದು ನಿರ್ವಪಕ ಶಿವಾರ್ಜುನ್ ಅವರಿಗೆ ಸರ್ಜಾ ಕುಟುಂಬದ ಪರವಾಗಿ ಟ್ರಿಬ್ಯೂಟ್ ಅಂತೆ. ‘ಶಿವಾರ್ಜುನ್ ಅಂಕಲ್ ನನ್ನನ್ನು ಚಿಕ್ಕ ವಯಸ್ಸಿನಿಂದಲೂ ಎತ್ತಿ ಆಡಿಸಿದ್ದಾರೆ. ಅವರಿಗೋಸ್ಕರ ಮಾಡಿರುವ ಸಿನಿಮಾ ಇದು. ಇದರ ಮೂಲಕ ಅವರು ಇನ್ನಷ್ಟು ಸಿನಿಮಾಗಳನ್ನು ನಿರ್ವಿುಸುವಂತಾಗಲಿ ಎಂದರು ಚಿರಂಜೀವಿ ಸರ್ಜಾ.

ಈ ಚಿತ್ರದಲ್ಲಿ ನಟಿ ತಾರಾ ಅವರ ಪುತ್ರ ಕೃಷ್ಣ ಮೊದಲ ಬಾರಿಗೆ ನಟಿಸಿದ್ದಾರೆ. ಹಾಗಾಗಿ ವೇದಿಕೆ ಮೇಲೆ ತಾರಾ ಅವರ ಸಂಭ್ರಮ ಕೊಂಚ ಹೆಚ್ಚಾಗಿಯೇ ಇತ್ತು. ಇದೇ ಸಂದರ್ಭದಲ್ಲಿ ಚಿತ್ರರಂಗಕ್ಕಾಗಿ ದುಡಿದ 6 ಮಂದಿಗೆ ಚಿತ್ರತಂಡ ಸನ್ಮಾನ ಮಾಡಿ ಗೌರವಿಸಿತು. ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್, ಅಕ್ಷಿತಾ ಭೂಪಯ್ಯ,ಶಿವರಾಜ್ ಕೆ.ಆರ್.ಪೇಟೆ, ಕುರಿ ಪ್ರತಾಪ್ ಸೇರಿ ಬಹು ತಾರಾಗಣವೇ ಚಿತ್ರದಲ್ಲಿದೆ. ಈ ಚಿತ್ರವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net