

ಬೆಂಗಳೂರು: ‘ಗಂಡ ಹೆಂಡತಿ’, ‘ಉಗ್ರಂ’ ನಟ ತಿಲಕ್ ಶೇಖರ್ ದೊಡ್ಡಮಟ್ಟದ ಸಕ್ಸಸ್ಗಾಗಿ ಎದುರು ನೋಡುತ್ತಿದ್ದಾರೆ. ಪ್ರತಿ ವರ್ಷ 2-3 ಚಿತ್ರಗಳಲ್ಲಿ ನಟಿಸುತ್ತಾರಾದರೂ, ಅವರಿಗೆ ಯಾವ ಚಿತ್ರವೂ ಬ್ರೇಕ್ ನೀಡಿಲ್ಲ. ಹಾಗಂತ ತಿಲಕ್ ಕೂಡ ಕೈಕಟ್ಟಿ ಸುಮ್ಮನೇ ಕುಳಿತಿಲ್ಲ. ಅದೇ ಉತ್ಸಾಹ ಹಾಗೂ ಭರವಸೆಯಲ್ಲಿ ಹೊಸ ಸಿನಿಮಾ ಮಾಡುತ್ತಿರುತ್ತಾರೆ. ಇದೀಗ ‘ಉಸಿರು’ ಮೂಲಕ ತಿಲಕ್ ಮತ್ತೆ ವಾಪಸ್ಸಾಗಿದ್ದಾರೆ. ಕಾಲಿವುಡ್ನಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಇರುವ ಪ್ರಭಾಕರ್ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರವಿದು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ತಿಲಕ್ಗೆ ‘ಜಿಲ್ಕಾ’ ಖ್ಯಾತಿಯ ಪ್ರಿಯಾ ಹೆಗ್ಡೆ ಜೋಡಿಯಾಗಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಟೀಸರ್ ರಿಲೀಸ್ ಮಾಡಿದೆ. ನಟ ಶ್ರೀನಗರ ಕಿಟ್ಟಿ ಮತ್ತು ಕಿರುತೆರೆ ನಿರ್ಮಾಪಕ, ನಿರ್ದೇಶಕ ರವಿ ಆರ್. ಗರಣಿ ರಿಲೀಸ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ನಾಯಕ ತಿಲಕ್, ‘ಇಲ್ಲಿ ನಾನೊಬ್ಬ ಇನ್ವೆಸ್ಟಿಗೇಶನ್ ಆಫೀಸರ್. 07.08.09 ಎನ್ನುವ ಕೋಡ್ವರ್ಡ್ ರೀತಿ ಚಿತ್ರದಲ್ಲಿ ತುಂಬಾ ಆಸಕ್ತಿಕರವಾದ ವಿಚಾರಗಳಿವೆ’ ಎಂದು ಮಾಹಿತಿ ನೀಡಿದರು. ಪ್ರಿಯಾ ಹೆಗ್ಡೆ, ‘ನನ್ನ ಪಾತ್ರಕ್ಕೆ ಹಲವು ಶೇಡ್ಗಳಿವೆ. ನನ್ನ ಪಾತ್ರದಿಂದಲೇ ಕಥೆಗೆ ಮೇಜರ್ ಟ್ವಿಸ್ಟ್ ಸಿಗುತ್ತದೆ. ತೆಲುಗು ಸಿನಿಮಾದ ನಟನೆ ನೋಡಿ, ಈ ಚಿತ್ರಕ್ಕೆ ಅವಕಾಶ ಬಂತು’ ಎಂದು ಹೇಳಿಕೊಂಡರು. ಸಂತೋಷ್, ಅಪೂರ್ವ, ರಘು ರಾಮನಕೊಪ್ಪ, ಅರುಣ್ ಕಲಾಬಳಗದಲ್ಲಿದ್ದಾರೆ.