ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಜನವರಿಯಲ್ಲಿ ಬಿಡುಗಡೆ ಎಂದು ಮೊದಲು ಚಿತ್ರತಂಡ ಹೇಳಿಕೊಂಡಿತ್ತು. ಕಾರಣಾಂತರಗಳಿಂದ ಚಿತ್ರ ತಡವಾಗಿ, ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡ ನಿರ್ಧರಿಸಿದರೂ, ಈಗ ಅದಕ್ಕೆ ‘ಕರೊನಾ’ ಅಡ್ಡಿಪಡಿಸಿದೆ.
ಹಾಗಾದರೆ ಬಿಡುಗಡೆ ಯಾವಾಗ? ಜುಲೈನ ವರಮಹಾಲಕ್ಷ್ಮಿ ಹಬ್ಬದ (ಜುಲೈ 31) ಪ್ರಯುಕ್ತ ‘ತೋತಾಪುರಿ’ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಜಗ್ಗೇಶ್, ಧನಂಜಯ, ಅದಿತಿ ಪ್ರಭುದೇವ್, ವೀಣಾ ಸುಂದರ್, ಸುಮನ್ ರಂಗನಾಥ್, ದತ್ತಣ್ಣ ತಾರಾಗಣದಲ್ಲಿರುವ ‘ತೋತಾಪುರಿ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿರುವುದು ಗೊತ್ತಿರುವ ವಿಷಯವೇ. ಈಗಾಗಲೇ, ಮೊದಲ ಭಾಗದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನು ಶೇ. 30ರಷ್ಟು ಭಾಗದ ಶೂಟಿಂಗ್ ಮುಗಿದರೆ, ‘ತೋತಾಪುರಿ ಸೀಸನ್ 2’ ಸಹ ಮುಕ್ತಾಯವಾಗಲಿದೆಯಂತೆ.
ಆ ಸೀಸನ್ನ ವಿಶೇಷತೆಯನ್ನೂ ಹೇಳಿಕೊಳ್ಳುವ ಅವರು, ‘ಸಿನಿಮಾ ಶೀರ್ಷಿಕೆಯೇ ಹಣ್ಣಿನ ಹೆಸರಿರುವುದರಿಂದ ಅದಕ್ಕೆ ಸೀಸನ್ ಎಂದು ಬಳಸಿಕೊಂಡಿದ್ದೇವೆ. ಎರಡೂ ಭಾಗಗಳಲ್ಲಿನ ಕೆಲವು ದೃಶ್ಯಾವಳಿಗಳನ್ನಿಟ್ಟುಕೊಂಡು ಒಂದೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಪ್ಲ್ಯಾನ್ ಪ್ರಕಾರ ಏಪ್ರಿಲ್ನಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಕರೊನಾದಿಂದ ಎಲ್ಲವೂ ಮುಂದೂಡಿಕೆ ಆಗಿದೆ’ ಎನ್ನುತ್ತಾರೆ ವಿಜಯ್ ಪ್ರಸಾದ್. ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಕ್ಕ ನಂತರ ತಲಕಾಡು, ಬನ್ನೂರು, ಮೈಸೂರು, ಮೇಲುಕೋಟೆ, ಸಕಲೇಶಪುರ ಸುತ್ತಮುತ್ತ ಮೊದಲ ಭಾಗದ ಎರಡು ಹಾಡುಗಳು ಮತ್ತು ಎರಡನೇ ಭಾಗದ ಚಿತ್ರೀಕರಣ ನಡೆಸಲಾಗುತ್ತದೆ.