

‘ನಾನು ಶರೀರ, ಅವರು ನನ್ನ ಶಾರೀರ ...’ ಹಾಗಂತ ಪಿ.ಬಿ. ಶ್ರೀನಿವಾಸ್ ಕುರಿತು ಹೇಳಿದ್ದರು ಡಾ. ರಾಜಕುಮಾರ್. ಪಿ.ಬಿ. ಶ್ರೀನಿವಾಸ್ ಅವರ ಧ್ವನಿ ಡಾ. ರಾಜ್ಗೆ ಅದೆಷ್ಟು ಹೊಂದುತ್ತಿತ್ತು ಎಂದರೆ, ಅವರೇ ಹಾಡುತ್ತಿದ್ದಾರೆ ಎಂದನಿಸುತ್ತಿತ್ತು. ಹಾಗಾಗಿ, ಶ್ರೀನಿವಾಸ್ ತಮ್ಮ ಶಾರೀರ ಎಂದು ರಾಜಕುಮಾರ್ ಒಪ್ಪಿಕೊಂಡಿದ್ದರು. 50ರ ದಶಕದಿಂದ 70ರ ದಶಕದ ಮಧ್ಯಭಾಗದವರೆಗೂ, ರಾಜಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಪಿಬಿಎಸ್ ಧ್ವನಿಯಾಗಿದ್ದರು. ‘ಸಂಪತ್ತಿಗೆ ಸವಾಲ್’ ನಂತರ ರಾಜಕುಮಾರ್, ತಮ್ಮ ಚಿತ್ರಗಳಿಗೆ ತಾವೇ ಹಾಡುವುದಕ್ಕೆ ಪ್ರಾರಂಭಿಸಿದ ಮೇಲೆ, ಶ್ರೀನಿವಾಸ್ ಅವರು ಹಾಡುವುದು ಕಡಿಮೆಯಾಯಿತು.
ಪಿಬಿಎಸ್ ಅಲ್ಲದೆ ರಾಜಕುಮಾರ್ ಅವರಿಗೆ ಇನ್ನೂ ಹಲವು ಗಾಯಕರು ಹಾಡಿದ್ದಾರೆ. ರಾಜಕುಮಾರ್ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ದಲ್ಲಿ ಅವರಿಗೆ ಧ್ವನಿಯಾಗಿದ್ದು, ತಮಿಳಿನ ಖ್ಯಾತ ಗಾಯಕ ಸಿ.ಎಸ್. ಜಯರಾಮನ್. ಈ ಚಿತ್ರಕ್ಕಾಗಿ ‘ಶಿವಪ್ಪ ಕಾಯೋ ತಂದೆ ...’ ಮತ್ತು ‘ಕಾಯೋ ತಂದೆಯೇ ...’ ಹಾಡುಗಳಿಗೆ ಧ್ವನಿಯಾದವರು ಅವರೇ. ನಂತರ ‘ಸೋದರಿ’ ಚಿತ್ರಕ್ಕೆ ಹಾಡಿದ್ದು ಎ.ಎಂ. ರಾಜ. ನಂತರದ ದಿನಗಳಲ್ಲಿ ಘಂಟಸಾಲ, ಏಸುದಾಸ್, ಎ.ಪಿ. ಬಾಲಸುಬ್ರಹ್ಮಣ್ಯಂ ಮುಂತಾದವರು ರಾಜಕುಮಾರ್ಗೆ ಧ್ವನಿಯಾದರು. ಇದಲ್ಲದೆ ದಕ್ಷಿಣ ಭಾರತದ ಜನಪ್ರಿಯ ಗಾಯಕರಾದ ಶೀರ್ಕಾಳಿ ಗೋವಿಂದರಾಜನ್, ಟಿ.ಎಂ. ಸೌಂದರ್ರಾಜನ್, ಪೀಠಾಪುರಂ ನಾಗೇಶ್ವರ ರಾವ್ ಮುಂತಾದವರು ರಾಜಕುಮಾರ್ ಅವರಿಗಲ್ಲದಿದ್ದರೂ, ಅವರ ಚಿತ್ರಗಳಿಗೆ ಹಲವು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.