

ಹೈದರಾಬಾದ್: ಎಲ್ಲ ನಾಯಕ-ನಾಯಕಿಯರಿಗೆ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಎಲ್ಲ ಪಾತ್ರಗಳು ಇಷ್ಟವಾಗುವುದಿಲ್ಲ. ತಮಗೆ ಇಷ್ಟವಾದ ಹಾಗೂ ಇಷ್ಟವಾಗದ ಪಾತ್ರಗಳು ಯಾವುವು ಎಂಬುದನ್ನು ಅನೇಕ ನಟ-ನಟಿಯರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಅವಕಾಶಕ್ಕಾಗಿ ಅನಿವಾರ್ಯ ಕಾರಣಗಳಿಂದ ಇಷ್ಟವಿಲ್ಲದಿದ್ದರೂ ಕೆಲವೊಂದು ಪಾತ್ರಗಳನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆ ಸಾಲಿಗೆ ಇದೀಗ ಸ್ಟಾರ್ ನಟಿ ಸಮಂತಾ ( Samantha Ruth Prabhu ) ಕೂಡ ಸೇರಿಕೊಂಡಿದ್ದಾರೆ.
ಸಿನಿಮಾ ವೃತ್ತಿ ಜೀವನದಲ್ಲಿ 15 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ನಟಿ ಸಮಂತಾ ಅವರು ಇತ್ತೀಚಗೆ ಡೆಕ್ಕನ್ ಕ್ರಾನಿಕಲ್ಗೆ ಸಂದರ್ಶನ ನೀಡಿದರು. ಈ ವೇಳೆ ಅವರು ಸಿನಿಮಾ ರಂಗದಲ್ಲಿ ತಮ್ಮ ಆರಂಭದ ದಿನಗಳಲ್ಲಿನ ಹೋರಾಟಗಳು ಮತ್ತು ಉದ್ಯಮದಲ್ಲಿನ ಬೆಳವಣಿಗೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನನ್ನ ಸಿನಿ ಬದುಕಿನ ಮೊದಲ ಕೆಲವು ವರ್ಷಗಳು ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ, ಹೆಚ್ಚಿನ ಗ್ಲಾಮರಸ್ ಪಾತ್ರಗಳನ್ನು ಮಾಡಿದೆ. ಆ ಪಾತ್ರಗಳು ಇದು ನಾನೇ ಎಂಬಂತೆ ಭಾಸವಾಗುತ್ತಿರಲಿಲ್ಲ. ಆ ಸಮಯದಲ್ಲಿ ನಾನು ನನ್ನ ಸಹ ನಟಿಯರಂತೆ ಇರಲು, ಅವರಂತೆ ಕಾಣಲು, ಅವರಂತೆ ನಟಿಸಲು ಹಾಗೂ ಅವರಂತೆ ನೃತ್ಯ ಮಾಡಲು ತುಂಬಾ ಪ್ರಯತ್ನಿಸುತ್ತಿದ್ದೆ. ಈಗ ನನ್ನ ಸಿನಿ ಬದುಕನ್ನು ಒಮ್ಮೆ ಹಿಂತಿರುಗಿ ನೋಡಿದರೆ, ಅಂದಿನ ನನ್ನ ಪಾತ್ರಗಳು ಸಂಪೂರ್ಣವಾಗಿ ಹಾಸ್ಯಾಸ್ಪದವೆನಿಸುತ್ತದೆ ಎಂದು ಸಮಂತಾ ಹೇಳಿದರು. ಆ ಸಮಯದಲ್ಲಿ ಅಂತಹ ಪಾತ್ರಗಳಿಗೆ ಹೊಂದಿಕೊಳ್ಳಲು ನಾನು ಆಗಾಗ್ಗೆ ಹೆಣಗಾಡುತ್ತಿದ್ದೆ ಎಂದು ಸಮಂತಾ ಹೇಳಿದ್ದಾರೆ.
ತನ್ನ ಸಿನಿ ಜರ್ನಿಯನ್ನು ನೆನಪಿಸಿಕೊಳ್ಳುತ್ತಾ, ಇತ್ತೀಚಿನ ವರ್ಷಗಳು ನನ್ನನ್ನು ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ರೂಪಿಸಿವೆ. ಹದಿನೈದು ವರ್ಷಗಳು ಎಂಬುದು ಬಹಳ ಸಮಯ. ಅದರ, ಕೆಲವು ಭಾಗಗಳು ನನಗೆ ಶಾಶ್ವತ ಎಂಬಂತೆ ಭಾಸವಾಗುತ್ತವೆ ಮತ್ತು ಕೆಲವು ಭಾಗಗಳು ಮಸುಕಿನಂತೆ ಭಾಸವಾಗುತ್ತವೆ. ನಾನು ಈಗ ಕೆಲವು ಸಿನಿಮಾಗಳನ್ನು ನೋಡಿದರೆ ನಾನು ಎಷ್ಟು ಕೆಟ್ಟದಾಗಿ ನಟಿಸಿದ್ದೇನೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಆದರೆ, ಆ ಸಿನಿಮಾಗಳು ನನಗೆ ಕಲಿಯಲು ಇರುವ ಏಕೈಕ ಮಾರ್ಗವಾಗಿತ್ತು ಎಂದು ಹೇಳಿರುವ ಸಮಂತಾ, ಸಿನಿಮಾ ರಂಗದಲ್ಲಿ ಯಾವುದೇ ಮಾರ್ಗದರ್ಶಕರು ಅಥವಾ ಗಾಡ್ ಫಾದರ್ ಇಲ್ಲದೇ ಎಲ್ಲವನ್ನೂ ಸ್ವತಃ ಕಲಿತದ್ದನ್ನು ನೆನಪಿಸಿಕೊಂಡರು.
ಅಂದಹಾಗೆ, ಸಮಂತಾ ಅವರು ಈ ಹಿಂದೆ ಹಲವು ಚಿತ್ರಗಳಲ್ಲಿ ತಮ್ಮ ಗ್ಲಾಮರ್ ಪ್ರದರ್ಶನ ಮಾಡಿದ್ದಾರೆ. ತಮಿಳಿನಲ್ಲಿ ನಟ ಸೂರ್ಯ ಅಭಿನಯದ ಅಂಜಾನ್ ಸಿನಿಮಾದಲ್ಲಿ ಬಿಕಿನಿ ಸಹ ಧರಿಸಿದ್ದರು. ಕೆಲವು ಚಿತ್ರಗಳಲ್ಲಿ, ಅವರು ಇಂಟಿಮೇಟ್ ದೃಶ್ಯಗಳು ಮತ್ತು ತುಂಡುಡುಗೆಯಂತಹ ಗ್ಲಾಮರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಕಾಶಗಳಿಗಾಗಿ ಅಂತಹ ಗ್ಲಾಮರ್ ಪಾತ್ರಗಳನ್ನು ಮಾಡಿರುವುದಾಗಿ ಸಮಂತಾ ಹೇಳಿದ್ದಾರೆ. ಅಲ್ಲದೆ, ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾ ಅಂತಹ ಪಾತ್ರಗಳನ್ನು ಮಾಡಿರುವುದಾಗಿ ಸಮಂತಾ ತಿಳಿಸಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ಉತ್ತಮ ಪಾತ್ರಗಳಲ್ಲಿ ನಟಿಸುವುದಾಗಿಯೂ ಸಮಂತಾ ಹೇಳಿದ್ದಾರೆ. ತಮ್ಮ ನಟನೆ, ವ್ಯವಹಾರ ಮತ್ತು ಇತರ ಉದ್ಯಮಗಳು ಸೇರಿದಂತೆ ಹಲವಾರು ವಿಷಯಗಳನ್ನು ಸುಲಭವಾಗಿ ಬ್ಯಾಲೆನ್ಸ್ ಮಾಡುವುದನ್ನು ಕಲಿತಿರುವಾಗಿ ಸಮಂತಾ ಹೇಳಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಕೇವಲ ಒಂದೇ ಒಂದು ಕೆಲಸವನ್ನು ಮಾಡುತ್ತಿದೆ. ನಟನೆ ಬಿಟ್ಟು ಬೇರೆ ಏನು ಮಾಡುತ್ತಿರಲಿಲ್ಲ. ಆದರೆ, ಇಂದು ವಿಭಿನ್ನ ಕೆಲಸಗಳನ್ನು ನಿರ್ವಹಿಸುವುದನ್ನು ಕಲಿತಿದ್ದೇನೆ ಎಂದರು.
ಇನ್ನು ಸಿನಿ ಬದುಕಿನ ಬಗ್ಗೆ ಸಮಂತಾ ಹೇಳಿರುವ ಮಾತುಗಳಿಗೆ ಕೆಲ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ಲಾಮರಸ್ ಪಾತ್ರಗಳನ್ನು ಮಾಡುವುದು ತುಂಬಾ ಕಷ್ಟಕರವಾಗಿದ್ದರೆ, ಆಕೆ ಅದನ್ನು ನಿರಾಕರಿಸಬಹುದಿತ್ತು ಎಂದಿದ್ದಾರೆ. ಇನ್ನು ಕೆಲವರು ನೀವು ಚಿತ್ರರಂಗದಲ್ಲಿ ನಿಮ್ಮನ್ನು ಸ್ಥಾಪಿಸಿಕೊಳ್ಳಲು ಬಯಸಿದರೆ, ನೀವು ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ನೀವು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು, ಅದಕ್ಕಾಗಿಯೇ ನೀವೀಗ ಸ್ಟಾರ್ ನಾಯಕಿ ಆಗಿದ್ದೀರಾ ಎಂದು ಸಮಂತಾಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈಗ ಈ ರೀತಿ ಹೇಳುತ್ತಿರುವ ಸಮಂತಾ ಇತ್ತೀಚೆಗೆ ಪುಷ್ಪಾ ಚಿತ್ರದಲ್ಲಿ ಐಟಂ ಸಾಂಗ್ ಮಾಡಿರುವುದು ನಿಜಕ್ಕೂ ಆಶ್ಚರ್ಯ ಅಂತಾ ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಸಮಂತಾ ಪ್ರಸ್ತುತ ವ್ಯವಹಾರದತ್ತ ಗಮನ ಹರಿಸುತ್ತಿದ್ದಾರೆ. ಇದರ ನಡುವೆ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. (ಏಜೆನ್ಸೀಸ್)