

| ಹರ್ಷವರ್ಧನ್ ಬ್ಯಾಡನೂರು
ಅದೊಂದು ಸ್ಲಂ. ಅಲ್ಲಿಬ್ಬರು ಕಿಲಾಡಿಗಳು. ಒಬ್ಬ ನಸಗುನ್ನಿ (ಚಂದ್ರಕೀರ್ತಿ) ಇನ್ನೊಬ್ಬ ಡಾಲರ್ (ಗಿರಿ). ಕೆಲಸಕ್ಕೆ ಹೋಗಲ್ಲ. ಅಡ್ಡದಾರಿಯಲ್ಲಿ ಹಣ ಬಂದರೆ ಬಿಡಲ್ಲ. ಪ್ರತಿದಿನ ಒಬ್ಬೊಬ್ಬರ ತಲೆಮೇಲೆ ಕೈಯಿಟ್ಟು ಹಣ ಗಳಿಸಿ, ಚೆನ್ನಾಗಿ ಎಂಜಾಯ್ ಮಾಡುವ ಪೋಲಿಗಳು. ಒಂದು ಕಿಡ್ನಾಪ್ ಮಾಡುವ ಹಾಗೂ ಪುರಾತನ ವಿಗ್ರಹವನ್ನು ಹುಡುಕುವ ಡೀಲ್ ಅವರಿಗೆ ಸಿಗುತ್ತದೆ. ಅಪಹರಣ ಮಾಡುವ ಅವರಿಗೆ ವಿಗ್ರಹ ಸಿಗುವುದಿಲ್ಲ. ಒಂದೆಡೆ ರೌಡಿಗಳು, ಇನ್ನೊಂದೆಡೆ ಎಂಎಲ್ಎ ಕಡೆಯವರು, ಮತ್ತೊಂದೆಡೆ ಹನಿಟ್ರ್ಯಾಪ್ ಗ್ಯಾಂಗ್ನವರು ಎಲ್ಲರೂ ಆ ವಿಗ್ರಹಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಹಾಗಾದರೆ, ಆ ವಿಗ್ರಹ ಎಲ್ಲಿರುತ್ತೆ? ಯಾರು ತೆಗೆದುಕೊಂಡಿರುತ್ತಾರೆ? ಕೊನೆಗೆ ಸಿಗೋದು ಯಾರಿಗೆ? ಈ ಕಣ್ಣಾಮುಚ್ಚಾಲೆಯೇ ‘ತೂತುಮಡಿಕೆ’...
ನಿರ್ದೇಶಕ ಚಂದ್ರಕೀರ್ತಿ ಅವರೇ ಇಲ್ಲಿ ಹೀರೋ. ಮೊದಲ ಚಿತ್ರದಲ್ಲೇ ನಟನೆ, ನಿರ್ದೇಶನ ಎರಡರಲ್ಲೂ ಗಮನ ಸೆಳೆಯುತ್ತಾರೆ. ಅವರಿಗೆ ಸೈಡ್ಕಿಕ್ ಆಗಿ ಗಿರಿ ಶಿವಣ್ಣ ನಗಿಸುತ್ತಾರೆ. ಟೀ ಅಂಗಡಿ ಪಮ್ಮಿ ಪಾತ್ರದಲ್ಲಿ ಪಾವನಾ ಗೌಡ, ಪಿವೋಟ್ ಪಾಪಣ್ಣನ ಪಾತ್ರದಲ್ಲಿ ಅರುಣ್ ಮೂರ್ತಿ ಇಷ್ಟವಾಗುತ್ತಾರೆ. ಉಳಿದಂತೆ ಮನೆ, ಕೆಲಸಗಳ ನಡುವೆ ಸಿಲುಕಿ ಒದ್ದಾಡುವ ಪ್ರಮೋದ್ ಶೆಟ್ಟಿ, ಎರಡು ಬಾರಿ ಸೋತು ಮೂರನೇ ಬಾರಿ ಶಾಸಕನಾಗಲು ಹೋರಾಡುವ ರಾಮ್ಾಸ್ ಆಗಿ ಶಂಕರ್ ಅಶ್ವತ್ಥ್, ಹನಿಟ್ರಾ್ಯಪ್ ಕಿಂಗ್ಪಿನ್ ಪಾತ್ರದಲ್ಲಿ ‘ಉಗ್ರಂ’ ಮಂಜು, ಬಾಳೆಹಣ್ಣು ಮಂಡಿ ಕಣ್ಣನ್ ಪಾತ್ರದಲ್ಲಿ ನಂದಗೋಪಾಲ್ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸ್ಲಂನಲ್ಲೇ ಕತೆ ನಡೆಯುವ ಕಾರಣ ಅಲ್ಲಿನ ಜೀವನ ಮತ್ತು ಶ್ರೀಮಂತಿಕೆಯ ಆಸೆ ಹೊತ್ತ ಕಂಗಳ ಹಿಂದಿನ ನೂರೆಂಟು ಸಮಸ್ಯೆಗಳೇ ಇಲ್ಲಿನ ಜೀವಾಳ. ಆ ಸಮಸ್ಯೆಗಳಿಗೇ ಹಾಸ್ಯ ಬೆರೆಸಿ ಜನರ ಮುಂದಿಟ್ಟಿದ್ದಾರೆ ನಿರ್ದೇಶಕ ಚಂದ್ರಕೀರ್ತಿ. ಆದರೆ, ಅವರಿಗೆ ಇನ್ನೂ ಕಲಿಯಲು - ಬೆಳೆಯಲು ಸಾಕಷ್ಟು ಸ್ಕೋಪ್ ಇದೆ. ಲಾಜಿಕ್ ಎಂಬುದು ಮ್ಯಾಜಿಕ್ನಲ್ಲಿ ಕಳೆದುಹೋಗಿದ್ದರೂ ಅಲ್ಲೊಂದು ಕಾಮಿಡಿ ಕಿಕ್ ಕೊಟ್ಟು ಮರೆಸುವ ಪ್ರಯತ್ನ ಮಾಡಿದ್ದಾರೆ.
ಸ್ವಾಮಿನಾಥನ್ ಅವರ ಸಂಗೀತದಲ್ಲಿ ‘ಯಾಮಾರಿದೆ ಹೃದಯ’ ಹಾಡು ಕೇಳುವಂತಿದೆ. ನವೀನ್ ಚಲ್ಲಾ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ‘ತೂತುಮಡಿಕೆ’ಯಲ್ಲಿ ದ್ವೀತೀಯಾರ್ಧದಲ್ಲಿ ಬರುವ ಕೆಲ ತೂತುಗಳು ರಿಪೇರಿಯಾಗಿದ್ದರೆ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ತುಂಬಿಸುತ್ತಿತ್ತೇನೋ! ಆದರೂ ಒಮ್ಮೆ ನೋಡಲಡ್ಡಿಯಿಲ್ಲ.