ಹೀಗೊಂದು ಆಶಾಭಾವನೆ: ಈ ವರ್ಷ ಸೆಂಚುರಿ ಗ್ಯಾರಂಟಿ

Sandalwood
Published on

ಕೆಲವೇ ವರ್ಷಗಳ ಹಿಂದಿನ ಮಾತು. ಕನ್ನಡ ಚಿತ್ರರಂಗದಲ್ಲಿ ಪ್ರತೀ ವರ್ಷ 200ರಿಂದ 250 ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಇನ್ನು, 350ರಿಂದ 400 ಚಿತ್ರಗಳು ಸೆನ್ಸಾರ್ ಆಗುತ್ತಿದ್ದವು. ಆದರೆ, ಕಳೆದೆರಡು ವರ್ಷಗಳಲ್ಲಿ ಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು, ಲಾಕ್​ಡೌನ್ ಮತ್ತು ಕರೊನಾ ಭಯದಿಂದ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಕಳೆದ ವರ್ಷ 58 ಚಿತ್ರಗಳು ಬಿಡುಗಡೆಯಾಗಿದ್ದು, ಈ ವರ್ಷ 100 ಚಿತ್ರಗಳಾದರೂ ಬಿಡುಗಡೆಯಾಗುತ್ತವಾ ಎಂಬ ಕುತೂಹಲ ಎಲ್ಲರಿಗೂ ಇದೆ.

| ಚೇತನ್ ನಾಡಿಗೇರ್ ಬೆಂಗಳೂರು

ಸೆಪ್ಟೆಂಬರ್ ಮುಗಿಯುವುದಕ್ಕೆ ಇನ್ನೊಂದೇ ವಾರ. ಇಂದು ಬಿಡುಗಡೆಯಾಗುತ್ತಿರುವ ‘ಪುಕ್ಸಟ್ಟೆ ಲೈಫು’ ಮತ್ತು ‘ಜನುಮದ ಜಾತ್ರೆ’ ಸೇರಿ ಇದುವರೆಗೂ ಒಟ್ಟು 58 ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರವಾಗಿಲ್ಲ. ಏಕೆಂದರೆ, ಕಳೆದ ಬಾರಿ ಬಿಡುಗಡೆಯಾಗಿದ್ದು, 73 ಚಿತ್ರಗಳು ಮಾತ್ರ. ಅದರಲ್ಲೂ ನಾಲ್ಕು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಈ ವರ್ಷವೂ ಅದೇ ಮುಂದುವರೆಯುತ್ತದಾ? ಎಂಬ ಪ್ರಶ್ನೆ ಚಿತ್ರರಂಗದ ವಲಯದಲ್ಲಿ ಸಹಜವಾಗಿಯೇ ಇತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಸ್ವಲ್ಪ ಆಶಾಭಾವನೆ ತರಿಸಿವೆ.

ಕಳೆಗಟ್ಟಲಿವೆ ಚಿತ್ರಮಂದಿರಗಳು: ಅಕ್ಟೋಬರ್ 01ರಿಂದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇದ್ದು, ಸದ್ಯದಲ್ಲೇ ಈ ಕುರಿತು ಸರ್ಕಾರದ ಆದೇಶ ಸಹ ಹೊರಬೀಳುವ ನಿರೀಕ್ಷೆ ಇದೆ. ಇದರಿಂದಾಗಿ ಮುಂದಿನ ಮೂರು ತಿಂಗಳಲ್ಲಿ ಪ್ರತೀ ವಾರ ಎರಡ್ಮೂರು ಚಿತ್ರಗಳಾದರೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಒಂಭತ್ತು ತಿಂಗಳಲ್ಲಿ 58 ಚಿತ್ರಗಳು ಬಿಡುಗಡೆಯಾಗಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಸೆಂಚುರಿ ಹೊಡೆಯುವುದು ಗ್ಯಾರಂಟಿ ಮತ್ತು ವಾರಕ್ಕೆ ಮೂರಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆಯಾದರೆ, ಆ ಸಂಖ್ಯೆ 120 ಮುಟ್ಟಿದರೂ ಆಶ್ಚರ್ಯವೇನಿಲ್ಲ.

ಹಾಗೆ ನೋಡಿದರೆ, ಚಿತ್ರಪ್ರದರ್ಶನ ಜುಲೈ ಮಧ್ಯಭಾಗದಿಂದಲೇ ಶುರುವಾಗಿದೆ ಮತ್ತು ಇಲ್ಲಿಯವರೆಗೂ 14 ಹೊಸ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಶೇ. 100ರಷ್ಟು ಹಾಜರಾತಿಗೆ ಅನುಮತಿ ಇಲ್ಲದಿರುವುದರಿಂದ ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಬಿಡುಗಡೆಯಾಗುತ್ತಿರುವುದೆಲ್ಲ ಸಣ್ಣ ಚಿತ್ರಗಳಾದ್ದರಿಂದ ಪ್ರೇಕ್ಷಕರು ಸಹ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕರೆ, ದೊಡ್ಡ ಚಿತ್ರಗಳು ಕ್ರಮೇಣ ಬಿಡುಗಡೆಯಾಗುತ್ತವೆ. ಜನ ಚಿತ್ರಮಂದಿರದತ್ತ ಬರುವುದಕ್ಕೆ ಶುರು ಮಾಡಿದರೆ, ಎಲ್ಲವೂ ಮೊದಲಿನ ಸ್ಥಿತಿಗೆ ಮರಳಲಿದೆ.

ಮುಂದೈತೆ ಹಬ್ಬ ...

ದಸರಾ ಹಬ್ಬದ ಸಂದರ್ಭದಲ್ಲಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಬಿಡುಗಡೆಯಾಗುವ ಮೂಲಕ ಖಾತೆ ತೆರೆಯುವ ಸಾಧ್ಯತೆ ಇದೆ. ಇನ್ನು ವರ್ಷದ ಕೊನೆಯ ಚಿತ್ರವಾಗಿ ರಕ್ಷಿತ್ ಅಭಿನಯದ ‘777 ಚಾರ್ಲಿ’ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಣೆಯಾಗಿದೆ. ಇದರ ಮಧ್ಯೆ, ಶಿವರಾಜಕುಮಾರ್ ಅಭಿನಯದ ‘ಭಜರಂಗಿ’, ‘ದುನಿಯಾ’ ವಿಜಯ್ ನಟನೆಯ ‘ಸಲಗ’, ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’, ಶ್ರೀಮುರಳಿ ‘ಮದಗಜ’, ಸತೀಶ್ ನೀನಾಸಂ ‘ಪೆಟ್ರೋಮ್ಯಾಕ್ಸ್’, ಜಗ್ಗೇಶ್ ‘ತೋತಾಪುರಿ’, ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’, ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಮತ್ತು ‘ರತ್ನನ್ ಪ್ರಪಂಚ’, ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಮುಂತಾದ ಚಿತ್ರಗಳು ಬಿಡುಗಡೆಗೆ ಕ್ಯೂನಲ್ಲಿವೆ. ಎಲ್ಲ ಅಂದುಕೊಂಡಂತೆ ಆದರೆ, ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಹ ಡಿಸೆಂಬರ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅದರ ನಿರ್ವಪಕರು ಹೇಳಿದ್ದಾರೆ. ಅಲ್ಲಿಗೆ, ಮುಂದಿನ ತಿಂಗಳಲ್ಲಿ ಸಾಲುಸಾಲು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಅದಕ್ಕೂ ಮೊದಲು ಶೇ. 100 ಆಸನ ಭರ್ತಿಗೆ ಗ್ರೀನ್ ಸಿಗ್ನಲ್ ಸಿಗಬೇಕಷ್ಟೇ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net