

| ಹರ್ಷವರ್ಧನ್ ಬ್ಯಾಡನೂರು
ಪರಭಾಷಾ ಚಿತ್ರಗಳಿಗೆ ಮಣೆ ಹಾಕಲಾಗುತ್ತದೆ, ಕನ್ನಡ ಸಿನಿಮಾಗಳಿಗೆ ಕರ್ನಾಟಕದ ಚಿತ್ರಮಂದಿರಗಳಲ್ಲೇ ಪ್ರಾಮುಖ್ಯತೆ ನೀಡುತ್ತಿಲ್ಲ, ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಲೇಯಿದೆ. ಪ್ಯಾನ್ ಇಂಡಿಯಾ ಪರಿಕಲ್ಪನೆಗೂ ಮುಂಚೆಯೇ ಕನ್ನಡ ಚಿತ್ರರಂಗದ ಈ ಬೇಡಿಕೆ ಇದ್ದೇ ಇತ್ತು. ಇದೀಗ, ಮತ್ತೆ ಮುನ್ನಲೆಗೆ ಬಂದಿದೆ. ಪರಭಾಷಾ ಚಿತ್ರಗಳ ವಿರುದ್ಧ ಮತ್ತೊಮ್ಮೆ ಧ್ವನಿ ಎದ್ದಿದೆ.
ಇಂದು ಕನ್ನಡ ಚಿತ್ರಗಳಿಲ್ಲ
ಈ ವಾರ ಕರ್ನಾಟಕದಲ್ಲಿ ಒಂದೂ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಅದಕ್ಕೆ ಕಾರಣ ಪರಭಾಷಾ ಚಿತ್ರಗಳ ಅಬ್ಬರ. ತಮಿಳಿನಲ್ಲಿ ರಜಿನಿಕಾಂತ್ ಅಭಿನಯದ "ಜೈಲರ್' ಗುರುವಾರ (ಆ.10) ರಿಲೀಸ್ ಆಗಿದ್ದು, ತೆಲುಗಿನಲ್ಲಿ ಚಿರಂಜೀವಿ ನಟಿಸಿರುವ "ಭೋಲಾ ಶಂಕರ್', ಬಾಲಿವುಡ್ನಲ್ಲಿ ಸನ್ನಿ ಡಿಯೋಲ್ ಅಭಿನಯದ "ಗದರ್ 2' ಹಾಗೂ ಅಕ್ಷಯ್ ಕುಮಾರ್ ನಾಯಕನಾಗಿರುವ "ಓ ಮೈ ಗಾಡ್ 2' ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಪರಭಾಷಾ ಚಿತ್ರಗಳ ಅಬ್ಬರದಿಂದ ಬೆಚ್ಚಿರುವ ಕನ್ನಡ ಚಿತ್ರತಂಡಗಳು, ರಿಲೀಸ್ಗೆ ಹಿಂದೇಟು ಹಾಕಿದ್ದಾರೆ.
ಮಲ್ಟಿಪ್ಲೆಕ್ಸ್ ಒಂದೇ ಸ್ವಲ್ಪ ತಲೆಬಿಸಿ
ಈ ನಾಲ್ಕು ಬಿಗ್ ಬಜೆಟ್ ಪರಭಾಷಾ ಸ್ಟಾರ್ ಚಿತ್ರಗಳಿಂದ ಈ ವಾರ ಮಾತ್ರವಲ್ಲ ಮುಂದಿನ ಎರಡು ಮೂರು ವಾರಗಳ ಕಾಲ ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ನವೀನ್ ಶಂಕರ್, ಅರ್ಚನಾ ಜೋಯಿಸ್ ಅಭಿನಯದ ಶ್ರೀಕಾಂತ್ ನಿರ್ದೇಶನದ "ಕ್ಷೇತ್ರಪತಿ' ಚಿತ್ರ ಆ. 18ರಂದು ರಿಲೀಸ್ ಆಗಲಿದೆ. "130 ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡಲು ಪ್ಲಾ$್ಯನ್ ಹಾಕಿಕೊಂಡಿವೆ. ಅದರಂತೆ ಬಹುತೇಕ ಥಿಯೇಟರ್ಗಳು ೈನಲ್ ಆಗಿವೆ. ಆದರೆ, ಮಲ್ಟಿಪ್ಲೆಕ್ಸ್ಗಳಿಂದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಹಿಂದೆ "ಹೊಂದಿಸಿ ಬರೆಯಿರಿ' ಸಿನಿಮಾ ರಿಲೀಸ್ ಆದಾಗಲೂ ಶಾರುಖ್ ಖಾನ್ ನಟನೆಯ "ಪಠಾಣ್' ಬಿಡುಗಡೆಯಾಗಿ, ಮಲ್ಟಿಪ್ಲೆಕ್ಸ್ ಸಮಸ್ಯೆ ಎದುರಾಗಿತ್ತು' ಎಂದು ಹೇಳಿಕೊಳ್ಳುತ್ತಾರೆ ನವೀನ್ ಶಂಕರ್.
ಮುಂದಕ್ಕೆ ಹೋಯಿತು "ತೋತಾಪುರಿ 2'
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜಗ್ಗೇಶ್, ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ವಿಜಯ್ ಪ್ರಸಾದ್ ನಿರ್ದೇಶನದ "ತೋತಾಪುರಿ 2' ಚಿತ್ರ ಇಂದು ರಿಲೀಸ್ ಆಗಬೇಕಿತ್ತು. "ಜೈಲರ್' ರಿಲೀಸ್ ಡೇಟ್ ಘೋಷಿಸಿಕೊಂಡ ಕೆಲ ದಿನಗಳ ಬಳಿಕ "ತೋತಾಪುರಿ 2' ಕೂಡ ಇದೇ ದಿನ ಬಿಡುಗಡೆ ಎಂದು ಘೋಷಿಸಿಕೊಂಡಿತ್ತು. ಆದರೆ, ಯಾವಾಗ "ಜೈಲರ್' ಜತೆ "ಭೋಲಾ ಶಂಕರ್', "ಓ ಮೈ ಗಾಡ್ 2' ಮತ್ತು "ಗದರ್ 2' ಚಿತ್ರಗಳೂ ಇಂದೇ ರಿಲೀಸ್ ಎಂದು ಅಂತಿಮವಾಯಿತೋ, "ತೋತಾಪುರಿ 2' ಚಿತ್ರತಂಡ ರಿಲೀಸ್ ದಿನಾಂಕವನ್ನು ಮುಂದೂಡಿದೆ.
ಫಿಲಂ ಚೇಂಬರ್ ಮೆಟ್ಟಿಲೇರಿದ "ಕೌಸಲ್ಯಾ…'
ಪರಭಾಷಾ ಚಿತ್ರಗಳು ರಿಲೀಸ್ ಆಗುತ್ತಿರುವ ಕಾರಣ ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಶೋಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ "ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ನಿರ್ದೇಶಕ ಶಶಾಂಕ್ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು.
ಹಾಸ್ಟೆಲ್ ಹುಡುಗರು ವಿಭಿನ್ನ ಮಾರ್ಕೆಟಿಂಗ್
ಮೂರು ವಾರಗಳನ್ನು ಪೂರೈಸಿರುವ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಇದೀಗ ನಾಲ್ಕನೇ ವಾರಕ್ಕೆ ಪದಾರ್ಪಣೆ ಮಾಡಲಿದೆ. ಅದರ ಬೆನ್ನಲ್ಲೇ ಪರಭಾಷಾ ಚಿತ್ರಗಳ ಆಟದ ನಡುವೆ ಹೊಸ ಬಗೆಯ ಮಾರ್ಕೆಟಿಂಗ್ ಐಡಿಯಾ ಮಾಡಿಕೊಂಡಿದ್ದಾರೆ. ಅದರಂತೆ ಸೋಮವಾರ ಮಧ್ಯಾಹ್ನದಿಂದ ಗುರುವಾರ ರಾತ್ರಿವರೆಗೆ ಎರಡು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತ ನೀಡಲಾಗುತ್ತಿದೆ. ಈ ಬಗ್ಗೆ ನಿರ್ಮಾಪಕ ವರುಣ್ ಗೌಡ, "ಪರಭಾಷೆಯ ಸ್ಟಾರ್ ಚಿತ್ರಗಳು ಬಂದರೆ ಒಳ್ಳೆಯ ಕನ್ನಡ ಸಿನಿಮಾಗಳನ್ನೂ ತೆಗೆದುಬಿಡುತ್ತಾರೆ. ಎರಡು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತ ಕೊಡುಗೆ ನೀಡುತ್ತಿರುವುದು ಹಣ ಮಾಡುವ ಉದ್ದೇಶದಿಂದಲ್ಲ. ಅದರಿಂದ ಲಾಭವೂ ಇಲ್ಲ. ಹೆಚ್ಚು ಜನರಿಗೆ ತಲುಪಲಿ ಎಂಬುದು ನಮ್ಮ ಉದ್ದೇಶ' ಎಂದು ಮಾಹಿತಿ ನೀಡುತ್ತಾರೆ.
ಮುಂದೆಯೂ ಥಿಯೇಟರ್ಗಳ ಸಮಸ್ಯೆ ಸಾಧ್ಯತೆ
ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆಗಳು ಎದುರಾಗುವ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗೇಂದ್ರ, "ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ರಿಲೀಸ್ ಆದಾಗ ಥಿಯೇಟರ್ ಮಾಲೀಕರು ಒಂದು ದೊಡ್ಡ ಮೊತ್ತಕ್ಕೆ ಚಿತ್ರವನ್ನು ಖರೀದಿಸಿಬಿಡುತ್ತಾರೆ. ಆ ಚಿತ್ರವನ್ನು ಸತತವಾಗಿ ಎಷ್ಟು ದಿನ ಬೇಕಾದರೂ ಪ್ರದರ್ಶಿಸಬಹುದು. ಅದನ್ನು ಎ್ಎಚ್ ಅರ್ಥಾತ್ ಫಿಕ್ಸೆಡ್ ಹೈಯರ್ ಎನ್ನುತ್ತಾರೆ. ಆದರೆ, ಒಮ್ಮೆ ಆ ಸಿನಿಮಾ ತೆಗೆದು ಬೇರೆ ಸಿನಿಮಾ ಪ್ರದರ್ಶನ ಮಾಡಿದರೆ, ಅಲ್ಲಿಗೆ ಒಪ್ಪಂದ ಮುಗಿದಂತೆ. ಹೀಗಾಗಿ ಒಮ್ಮೆ ಖರೀದಿ ಮಾಡಿದ ಚಿತ್ರವನ್ನು ಥಿಯೇಟರ್ ಮಾಲೀಕರು ತಮಗೆ ಲಾಭ ಬರುವವರೆಗೂ ಪ್ರದರ್ಶನ ಮುಂದುವರಿಸಿದರೆ, ಮುಂದಿನ ಎರಡು, ಮೂರು ವಾರಗಳವರೆಗೂ ಕನ್ನಡ ಚಿತ್ರಗಳಿಗೆ ಸಮಸ್ಯೆ ಆಗಬಹುದು' ಎಂದು ಮಾಹಿತಿ ನೀಡುತ್ತಾರೆ.