ತುಂಟ ರಾಜನ ಕಥೆ ಇದು...; ಅರಮನೆ ಸೆಟ್ಟಿನಲ್ಲಿ ರಂಗನಾಯಕನ ಗಾನ ಬಜಾನ

Ranganayaka
Published on

ಬೆಂಗಳೂರು: ಗುರುಪ್ರಸಾದ್ ಮತ್ತು ಜಗ್ಗೇಶ್ ಜತೆಗೆ ಸಿನಿಮಾ ಮಾಡುತ್ತಾರೆ ಎಂಬ ವಿಷಯ ಮೊದಲಿಗೆ ಕೇಳಿ ಬಂದಿದ್ದು ಎರಡು ವರ್ಷಗಳ ಹಿಂದೆ. ಕರೊನಾ, ಲಾಕ್​ಡೌನ್ ಸೇರಿದಂತೆ ಬೇರೆಬೇರೆ ಕಾರಣಗಳಿಗೆ ಚಿತ್ರ ತಡವಾಗುತ್ತಲೇ ಹೋಯಿತು. ಇದೀಗ ಚಿತ್ರ ಕೊನೆಗೂ ಶುರುವಾಗಿದ್ದು, ಪ್ರಜ್ವಲ್ ಸ್ಟುಡಿಯೋದಲ್ಲಿ ಕಳೆದ ಸೋಮವಾರದಿಂದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕಾಗಿಯೇ ಅಲ್ಲಿ ಒಂದು ಅರಮನೆ ಸೆಟ್ ನಿರ್ವಿುಸಲಾಗಿದೆ. ಜತೆಗೆ ಒಂದು ಹೂದೋಟವನ್ನೂ ನಿರ್ವಿುಸಲಾಗಿದೆ. ಅದರಲ್ಲಿ ‘ಎನ್ನ ಮನದರಸಿ ...’ ಎಂಬ ಕೀಟಲೆ ಹಾಡೊಂದನ್ನು ಈಗಾಗಲೇ ಚಿತ್ರೀಕರಿಸಲಾಗಿದೆ.

‘ರಂಗನಾಯಕ’ ಪ್ರಾರಂಭವಾಗಿದ್ದು ಈಗಾದರೂ, 14 ವರ್ಷಗಳ ಹಿಂದೆಯೇ ಗುರುಪ್ರಸಾದ್​ಗೆ ಇಂಥದ್ದೊಂದು ಯೋಚನೆ ಬಂದಿತ್ತಂತೆ. ‘‘ಎದ್ದೇಳು ಮಂಜುನಾಥ’ ಬಿಡುಗಡೆಗೆ ತಯಾರಿ ನಡೆದಿತ್ತು. ಆ ಸಂದರ್ಭದಲ್ಲಿ ಒಮ್ಮೆ ಜಗ್ಗೇಶ್ ಅವರು ಒಂದು ಗೋಷ್ಠಿಯಲ್ಲಿ ಹಲವು ರಂಗಗೀತೆಗಳನ್ನು ಹಾಡಿದ್ದರು. ಅದನ್ನು ಕೇಳಿ ಒಂದು ಆಲೋಚನೆ ಹೊಳೆದಿತ್ತು. ಆದರೆ, ಆ ಚಿತ್ರಕ್ಕೆ ಬಜೆಟ್ ಜಾಸ್ತಿ ಬೇಕಿತ್ತು. ಈ ಮಧ್ಯೆ, ಕಾರಣಾಂತರಗಳಿಂದ ನಾವಿಬ್ಬರೂ ಚಿತ್ರ ಮಾಡುವುದಕ್ಕೆ ಆಗಿರಲಿಲ್ಲ. ಮತ್ತೆ ಚಿತ್ರ ಮಾಡಬೇಕು ಅಂತ ಯೋಚಿಸಿದಾಗ, ನಮ್ಮ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ನಿರ್ವಪಕ ವಿಖ್ಯಾತ್ ಅವರನ್ನು ಕರೆದುಕೊಂಡು ಬಂದರು. ಒಂದಿಷ್ಟು ಮೀಟಿಂಗ್​ಗಳ ನಂತರ ಈ ಚಿತ್ರ ಮಾಡುವ ತೀರ್ಮಾನವಾಯಿತು. ಇದೊಂದು ಐತಿಹಾಸಿಕ ಚಿತ್ರ. ತುಂಟ ರಾಜನೊಬ್ಬನ ಕಥೆ ಈ ಚಿತ್ರದಲ್ಲಿದೆ. ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯಲಿದ್ದು, ಲಂಡನ್​ನಲ್ಲೂ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ಗುರುಪ್ರಸಾದ್.

ಇದೊಂದು ವಿಭಿನ್ನ ಪ್ರಯತ್ನ ಎನ್ನುವ ಜಗ್ಗೇಶ್, ‘ಗುರು ಯೋಚನೆ ಬಹಳ ಚೆನ್ನಾಗಿದೆ. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದ ಹಾಸ್ಯದ ಕ್ಲಿಪ್ಪಿಂಗ್​ಗಳನ್ನು ಜನ ಸಾವಿರಾರು ಬಾರಿ ಟಿವಿಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತಾರೆ. ಇದು ಸಹ ಅದೇ ಸಾಲಿಗೆ ಸೇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಜಗ್ಗೇಶ್​ಗೆ ನಾಯಕಿಯಾಗಿ ರಚಿತಾ ಮಹಾಲಕ್ಷ್ಮೀ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net