

ಬೆಂಗಳೂರು: ಇಂದು ಯಶ್ ಅವರ ಅಭಿಮಾನಿಗಳಿಗೆ ಸಂಭ್ರಮದ ದಿನ. ಕಾರಣ, ಯಶ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ‘ಮೊಗ್ಗಿನ ಮನಸ್ಸು’ ಬಿಡುಗಡೆಯಾಗಿ ಇಂದಿಗೆ 12 ವರ್ಷಗಳಾಗಿವೆ. ಸರಿಯಾಗಿ ಇದೇ ದಿನ, ಅಂದರೆ 2008ರ ಜುಲೈ 18ರಂದು ಚಿತ್ರ ಬಿಡುಗಡೆಯಾಗಿತ್ತು. ಈ ಸಂಭ್ರಮವನ್ನು ಆಚರಿಸಲು ಅಭಿಮಾನಿಗಳು ‘ಯಶ್ 12’ ಎಂಬ ವಿಶೇಷ ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿರುವ ಯಶ್ ಅವರ ಅಭಿಮಾನಿಗಳ ಸಂಘಗಳೆಲ್ಲಾ ಇಂದು ಸಿಡಿಪಿ ಹಾಕಿಕೊಳ್ಳುವ ಮೂಲಕ ಆಚರಿಸುತ್ತಿದ್ದಾರೆ. ವಿಶೇಷವೆಂದರೆ, ಇದು ಯಶ್ ಅವರ ಮೊದಲ ಚಿತ್ರ ಮಾತ್ರವಲ್ಲ, ಅವರ ಪತ್ನಿ ರಾಧಿಕಾ ಪಂಡಿತ್ ಅವರ ಮೊದಲ ಚಿತ್ರವೂ ಹೌದು. ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಅವರೂ ನಾಯಕಿಯಾಗಿ ಎಂಟ್ರಿ ಕೊಟ್ಟರು. ಹಾಗಾಗಿ, ಯಶ್ ಮತ್ತು ರಾಧಿಕಾ ಇಬ್ಬರೂ ಚಿತ್ರರಂಗಕ್ಕೆ ಬಂದು 12 ವರ್ಷಗಳಾಗಿವೆ. ಒಂದೇ ವ್ಯತ್ಯಾಸವೆಂದರೆ, 12 ವರ್ಷಗಳ ಹಿಂದೆ ಚಿತ್ರದಲ್ಲಿ ನಾಯಕ-ನಾಯಕಿಯಾಗಿದ್ದವರು, ಇಂದು ರಿಯಲ್ ಲೈಫ್ನಲ್ಲಿ ಸತಿ-ಪತಿಯಾಗಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಯಶ್, ‘ಇದರಲ್ಲಿ ಸಂಭ್ರಮಪಡುವಂತದ್ದೇನೂ ಇಲ್ಲ. ಸಂಭ್ರಮಿಸುವ ಸಮಯವೂ ಇದಲ್ಲ. ಎಲ್ಲಾ ಕಡೆ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಮನಸ್ಸಿಗೆ ನೋವಾಗುತ್ತಿ್ತೆ. ನನ್ನ ಕೈಲಿ ಏನಾಗುತ್ತದೋ, ಅದನ್ನು ಮಾಡುತ್ತಿದ್ದೀನಿ. ಮೊದಲು ಇದೆಲ್ಲಾ ಮುಗಿಯಬೇಕು. ಆದರೂ ಅಭಿಮಾನಿಗಳು ಪ್ರೀತಿ ಮತ್ತು ಅಭಿಮಾನವನ್ನು ತೋರಿಸುತ್ತಿದ್ದಾರೆ. ಅವರಿಗೆ ಚಿರಋಣಿ’ ಎನ್ನುತ್ತಾರೆ ಯಶ್. ಇನ್ನು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಿ ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಮುಗಿಯಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಸದ್ಯಕ್ಕೆ ಚಿತ್ರೀಕರಣ ಮಾಡುವಂತಿಲ್ಲ. ‘ಇನ್ನೊಂದು 20 ದಿನ ಚಿತ್ರೀಕರಣ ಇರಬಹುದು ಅಷ್ಟೇ. ಮಿಕ್ಕಂತೆ ಎಲ್ಲಾ ಮುಗಿದಿದೆ. ಚಿತ್ರೀಕರಣ ಮಾಡುವ ವಾತಾವರಣವಿಲ್ಲ. ಈಗ ಎಲ್ಲಕ್ಕಿಂತ ಪ್ರಾಣ ಮುಖ್ಯ. ಜೀವ ಉಳಿದರೆ, ಆಮೇಲೆ ಸಂಪಾದನೆ ಮಾಡಬಹುದು ಎಂಬ ಪರಿಸ್ಥಿತಿ ನಿರ್ವಣವಾಗಿದೆ. ಹಾಗಾಗಿ ಇವೆಲ್ಲಾ ಸ್ವಲ್ಪ ಕಡಿಮೆಯಾದ ಮೇಲಷ್ಟೇ ಚಿತ್ರೀಕರಣ’ ಎನ್ನುತ್ತಾರೆ ಯಶ್.