ನಾನಿದನ್ನು ಒಪ್ಪಿಕೊಳ್ಳಲ್ಲ, ವಡಿವೇಲ್​ ಸರ್​ ನನಗಿಂತಲೂ ತುಂಬಾ ಕ್ಯೂಟ್ ಎಂದ ರಶ್ಮಿಕಾ ಮಂದಣ್ಣ​

Rashmika
Published on

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಎಲ್ಲರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಕಡಿಮೆ ಅವಧಿಯಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಅದರಲ್ಲೂ ಸ್ಟಾರ್​ ನಟರ ಜತೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರೀಯವಾಗಿರುವ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ದಿನನಿತ್ಯದ ಅಪ್ಡೇಟ್​ಗಳನ್ನು ನೀಡುತ್ತಿರುತ್ತಾರೆ. ಅದರಂತೆಯೇ ಇತ್ತೀಚಿನ ಫೋಟೋಶೂಟ್​ ಅನ್ನು ರಶ್ಮಿಕಾ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು ವೈರಲ್​ ಆಗಿದೆ. ಇದೇ ವೇಳೆ ರಶ್ಮಿಕಾ ಫೋಟೋಗಳನ್ನು ತಮಿಳು ಅಭಿಮಾನಿಗಳು ಖ್ಯಾತ ಹಾಸ್ಯ ನಟ ವಡಿವೇಲು ಅವರ ಕಾಮಿಡಿ ದೃಶ್ಯಗಳ ಫೋಟೋದೊಂದಿಗೆ ಸೇರಿಸಿ ರಶ್ಮಿಕಾ ವಡಿವೇಲ್​ ವರ್ಸನ್​ ಎಂದು ಹೆಸರಿಟ್ಟು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಾಕಷ್ಟು ಸದ್ದು ಕೂಡ ಮಾಡುತ್ತಿದೆ.

ರಶ್ಮಿಕಾ ಎಕ್ಸ್​ಪ್ರೆಸನ್​​ ಕ್ವೀನ್​ ಎಂತಲೂ ಪ್ರಖ್ಯಾತಿಯಾಗಿದ್ದಾರೆ. ನೂತನ ಫೋಟೋಶೂಟ್​ನಲ್ಲಿರುವ ಮುಖಭಾವವನ್ನು ವಡಿವೇಲು ಮುಖಭಾವಕ್ಕೆ ಹೋಲಿಸಿ ಎರಡು ಫೋಟೋಗಳನ್ನು ಒಟ್ಟಿಗೆ ಎಡಿಟ್​ ಮಾಡಿ ಕಾಲಿವುಡ್​ ಅಭಿಮಾನಿಗಳು ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ #VadiveluForLife ಎಂಬ ಹ್ಯಾಶ್​ಟ್ಯಾಗ್​ ಅನ್ನು ನೀಡಲಾಗಿದೆ.

ವಿಶೇಷವೆಂದರೆ ಇದು ರಶ್ಮಿಕಾ ಗಮನಕ್ಕೂ ಬಂದಿದ್ದು, ನಾನಿದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವಡಿವೇಲ್​ ಸರ್​ ನನಗಿಂತಲೂ ತುಂಬಾ ಕ್ಯೂಟ್​ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ರಶ್ಮಿಕಾ ಈವರೆಗೂ ತಮಿಳಿನ ಯಾವುದೇ ಚಿತ್ರದಲ್ಲೂ ನಟಿಸಿಲ್ಲ. ಆದರೂ ಕಾಲಿವುಡ್​ನಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಗೀತಾ ಗೋವಿಂದಂ ತೆಲುಗು ಚಿತ್ರದ ಸೂಪರ್​ ಹಿಟ್​ ಇಂಕೆಮ್​ ಇಂಕೆಮ್​ ಕಾವಲೆ ಹಾಡು. ಇಳಯದಳಪತಿ ವಿಜಯ್​ ಅವರ ಮಾಸ್ಟರ್​ ಚಿತ್ರಕ್ಕೆ ರಶ್ಮಿಕಾ ಹೆಸರು ಕೇಳಿಬಂದಿತ್ತು. ಆದರೆ ಇತರೆ ಚಿತ್ರಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದರಿಂದ ಅವಕಾಶ ವಂಚಿತರಾದರು. ಆದರೆ, ಕಾರ್ತಿ ಅಭಿನಯದ ಸುಲ್ತಾನ್​ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿದ್ದು ಕಾಲಿವುಡ್​ ಪಾದರ್ಪಣೆ ತವಕದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net