ಚಿಕ್ಕಂದಿನಲ್ಲೇ ಮನೆಯಿಂದ ಓಡಿಬಂದು, ಫುಟ್​ಪಾತ್​ನಲ್ಲಿ ಮಲಗಿ, ದೈಹಿಕ ಹಿಂಸೆ ಅನುಭವಿಸಿದ ಹುಡುಗಿ ಇಂದು ಸ್ಟಾರ್​ ನಟಿ!

Kangana
Published on

ನವದೆಹಲಿ: ಬಣ್ಣದ ಜಗತ್ತಿನಲ್ಲಿ ಮಿಂಚುವ ತಮ್ಮ ಕನಸುಗಳನ್ನು ಬೆನ್ನೇರಿ ಅನೇಕ ನಟರ-ನಟಿಯರು ತಮ್ಮ ಮನೆಗಳನ್ನು ತೊರೆದು ಕನಸಿನ ನಗರವಾದ ಮುಂಬೈ ಮತ್ತು ಬೆಂಗಳೂರಿಗೆ ಬಂದು ನೆಲೆಸಿ, ಸಾಕಷ್ಟು ಹೋರಾಟಗಳನ್ನು ಮಾಡಿ, ಜೀವನ ಕಟ್ಟಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಈ ಸಾಲಿನಲ್ಲಿ ಸೋನು ಸೂದ್ ಹಾಗೂ ನಟ ಯಶ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಮಿಂಚುವ ಆಸೆಯಿಂದ 15 ವರ್ಷಕ್ಕೆ ಮನೆಯಿಂದ ಓಡಿಹೋದ ನಟಿಯೊಬ್ಬಳು ಈಗ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆಕೆ ಯಾರೆಂಬ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ನಾವೀಗ ಪರಿಚಯಿಸಲು ಹೊರಟಿರುವ ನಟಿ ಉನ್ನತ ಸ್ಥಾನಕ್ಕೆ ಏರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹಲವಾರು ಹಿಟ್ ಚಲನಚಿತ್ರಗಳನ್ನು ನೀಡಿದ್ದು, ಅವರ ಅಭಿನಯಕ್ಕಾಗಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಂದಹಾಗೆ ಆಕೆ ಬೇರೆ ಯಾರೂ ಅಲ್ಲ ಕಂಗನಾ ರಣಾವತ್.

ಕಂಗನಾ ರಣಾವತ್ ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ ನಟಿಯಾಗುವ ಕನಸುಗಳನ್ನು ಬೆನ್ನಟ್ಟಲು ನಿರ್ಧರಿಸಿದರು. ಹೀಗಾಗಿ ಮುಂಬೈ ತಲುಪಲು ತಮ್ಮ ಮನೆಯನ್ನೇ ತೊರೆದರು. ತಂದೆಯು ಸಹ ಆಕೆಗೆ ಸಹಾಯ ಮಾಡಲು ನಿರಾಕರಿಸಿದರು. ಆದರೆ, ಕಂಗನಾ ಎಂದಿಗೂ ತನ್ನ ಭರವಸೆಯನ್ನು ಬಿಡದೇ, ತನ್ನ ಕನಸುಗಳನ್ನು ಬೆನ್ನೇರುವ ದೃಢ ಸಂಕಲ್ಪಕ್ಕೆ ಅಂಟಿಕೊಂಡರು.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ತಾನು ಮುಂಬೈಗೆ ಬಂದಾಗ, ಉಳಿಯಲು ಮನೆ ಇರಲಿಲ್ಲ ಮತ್ತು ಫುಟ್​ಪಾತ್​ ಮೇಲೆ ಮಲಗಬೇಕಾಯಿತು. ನನ್ನದು ಸಾವಿರ ಮೈಲುಗಳ ಪ್ರಯಾಣವಾಗಿದೆ. ನಾನು ಮುಂಬೈಗೆ ಪ್ರಥಮ ದರ್ಜೆಯ ವಿಮಾನದಲ್ಲಿ ಹಾರಲಿಲ್ಲ, ಬಸ್ಸುಗಳು, ಟ್ಯಾಕ್ಸಿಗಳು ಮತ್ತು ರೈಲುಗಳಲ್ಲಿ ಪ್ರಯಾಣಿಸಿದ್ದೇನೆ ಮತ್ತು ಸಾಕಷ್ಟು ನಡೆದಿದ್ದೇನೆ. ಮನೆ ಇಲ್ಲದ ಕಾರಣ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದೆ. ನಾನು ಸಾಕಷ್ಟು ಬಲೆಗಳಲ್ಲಿ ಸಿಕ್ಕಿಬಿದ್ದಿದ್ದೆ. ಆದ್ದರಿಂದ ನಾನು ಜನರ ವಿರುದ್ಧ ದೂರುಗಳನ್ನು ನೀಡಬೇಕಾಯಿತು. ನಾನು ನನ್ನ ಜೀವನದಲ್ಲಿ ಕೆಟ್ಟ ಭಾಗವನ್ನೂ ನೋಡಿದ್ದೇನೆ. ಮತ್ತೊಂದೆಡೆ, ನಾನು ಎರಡು ಬಾರಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದೇನೆ ಎಂದಿದ್ದರು.

ನಟಿ ಬರ್ಖಾ ದತ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿಯೂ ಮಾತನಾಡಿದ್ದ ಕಂಗನಾ, 17ನೇ ವಯಸ್ಸಿನಲ್ಲಿ ಬಾಲಿವುಡ್‌ನಲ್ಲಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯಿಂದ ದೈಹಿಕವಾಗಿ ಹಿಂಸೆಗೆ ಒಳಗಾದೆ ಎಂದು ಬಹಿರಂಗಪಡಿಸಿದರು. ಈ ಸಂದರ್ಭ ತುಂಬಾ ಕಷ್ಟಕರ ಮತ್ತು ಕಠಿಣ ಸಮಯವಾಗಿತ್ತು. ನನಗೆ ದೈಹಿಕ ಹಿಂಸೆಯನ್ನು ನೀಡಲಾಯಿತು. ನಾನು ಒಂದು ಬಲೆಯಲ್ಲಿ ಸಿಕ್ಕಿಬಿದ್ದಂತೆ ಭಾಸವಾಯಿತು. ಜನರು ನಿಮಗೆ ಸಹಾಯ ಮಾಡಬಹುದು ಎಂದು ನೀವು ಭಾವಿಸುತ್ತೀರಿ. ಆದರೆ, ನಿಧಾನವಾಗಿ ಬಲೆಯಲ್ಲಿ ಬೀಳಬೇಕಾಗುತ್ತದೆ ಎಂದರು.

ಭಯಾನಕ ಘಟನೆಯನ್ನು ನೆನಪಿಸಿಕೊಂಡ ಕಂಗನಾ, ತಂದೆಯ ವಯಸ್ಸಿನ ವ್ಯಕ್ತಿ ನನ್ನ ತಲೆಗೆ ಬಲವಾಗಿ ಹೊಡೆದನು. ಈ ವೇಳೆ ನನಗೆ ರಕ್ತಸ್ರಾವವಾಯಿತು. ನಾನು ಕೂಡ ಚಪ್ಪಲಿಯನ್ನು ಹೊರತೆಗೆದು ಅವನ ತಲೆಗೆ ಬಲವಾಗಿ ಹೊಡೆದೆ ಮತ್ತು ಅವನಿಗೂ ರಕ್ತಸ್ರಾವವಾಯಿತು. ಆ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಆದರೆ, ಆತನಿಗೆ ಶಿಕ್ಷೆಯಾಗಲಿಲ್ಲ. ನನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ಸಹ ನೀಡಲಾಯಿತು. ಇದೆಲ್ಲ ನಾನು ಜೀವನದಲ್ಲಿ ಎದುರಿಸಿದ ಕಠಿಣ ಸವಾಲುಗಳು ಎಂದರು.

ಅನುರಾಗ್ ಬಸು ಅವರ ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿಯೊಂದಿಗೆ ಕಂಗನಾ ರಣಾವತ್​, ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದ್ದಲ್ಲದೆ, ವಿಮರ್ಶಾತ್ಮಕ ಯಶಸ್ಸನ್ನು ಸಹ ಗಳಿಸಿತು ಮತ್ತು ಕಂಗನಾ ಅವರ ಅಭಿನಯವು ಸಹ ಪ್ರೇಕ್ಷಕರಿಗೆ ಇಷ್ಟವಾಯಿತು ಹಾಗೂ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾಯಿತು. ಇದಾದ ಬಳಿಕ ಕಂಗನಾ ಅವರು ಹಲವಾರು ಫ್ಲಾಪ್​ ಸಿನಿಮಾಗಳನ್ನು ನೀಡಿದರು. ಆದರೆ ನಂತರ ಫ್ಯಾಶನ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಗಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ರಾಝ್: ದಿ ಮಿಸ್ಟರಿ ಕಂಟಿನ್ಯೂಸ್, ತನು ವೆಡ್ಸ್ ಮನು, ತನು ವೆಡ್ಸ್ ಮನು ರಿಟರ್ನ್ಸ್, ಕ್ವೀನ್ ಮತ್ತು ಹೆಚ್ಚಿನವುಗಳಂತಹ ಹಲವಾರು ಹಿಟ್‌ಗಳಲ್ಲಿ ಅವರು ನಟಿಸಿದ್ದಾರೆ.

ಒಂದಲ್ಲ ಎರಡಲ್ಲ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಹಾಗೂ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್ ಮತ್ತು ಮಣಿಕರ್ಣಿಕಾ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಅವರು ಪ್ರತಿ ಚಿತ್ರಕ್ಕೆ 15-27 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು 21 ನೇ ವಯಸ್ಸಿನಲ್ಲಿ ಅವರ ಮೊದಲ ಮನೆಯ ಮಾಲೀಕರಾಗಿದ್ದರು.

ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಲಿದ್ದಾರೆ. ಅನುಪಮ್ ಖೇರ್, ಸತೀಶ್ ಕೌಶಿಕ್ ಮತ್ತು ಮಿಲಿಂದ್ ಸೋಮನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಈ ವರ್ಷ ಥಿಯೇಟರ್ ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net