ಮರಿಯಾಗಲು ರೆಡಿಯಾದ ‘ತಿಮ್ಮನ ಮೊಟ್ಟೆಗಳು’: ಇದೇ 27ಕ್ಕೆ ಸಿನಿಮಾ ರಿಲೀಸ್

timmana
Published on

ಬೆಂಗಳೂರು: ಕನ್ನಡದಲ್ಲಿ ಕಥೆ ಹಾಗೂ ಕಾದಂಬರಿಯಾಧರಿತ ಸಿನಿಮಾಗಳಿಗೆ ಒಂದು ಪರಂಪರೆಯೇ ಇದೆ. ಸದ್ಯ ಕೃತಿಯಾಧಾರಿತ ಚಿತ್ರಗಳು ಕಡಿಮೆಯಾಗುತ್ತಿದೆ ಎಂಬ ವಿಚಾರ ಮುನ್ನಲೆಗೆ ಬಂದಿರುವಾಗಲೇ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಾವೇ ರಚಿಸಿರುವ ‘ಕಾಡಿನ ನೆಂಟರು’ ಕಥಾ ಸಂಕಲನದ ‘ತಿಮ್ಮನ ಮೊಟ್ಟೆಗಳು’ ಕಥೆಯನ್ನು ಚಿತ್ರವಾಗಿಸಿದ್ದಾರೆ. ಈ ಹಿಂದೆ ‘ಹೊಂಬಣ್ಣ’, ‘ಎಂಥಾ ಕಥೆ ಮಾರಾಯ’ ಚಿತ್ರಗಳನ್ನು ನಿರ್ದೇಶಿಸಿದ್ದ ರಕ್ಷಿತ್, ಇದೀಗ ‘ತಿಮ್ಮನ ಮೊಟ್ಟೆಗಳು’ ಮೂಲಕ ಮನುಷ್ಯ ಹಾಗೂ ಪ್ರಾಣಿ ಸಂಘರ್ಷ ಹಾಗೂ ಕಾಳಿಂಗ ಸರ್ಪಗಳ ರಕ್ಷಣೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿ, ಫೆಸ್ಟಿವಲ್ ಟೂರ್ ಮಾಡಿರುವ ಚಿತ್ರ, ಇದೇ 27ರಂದು ಬಿಡುಗಡೆಯಾಗಲಿದೆ.

ನಿರ್ದೇಶಕರಾದ ಪಿ.ಶೇಷಾದ್ರಿ, ಕೂಡ್ಲು ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಉರಗ ತಜ್ಞ ಗೌರಿಶಂಕರ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಪಿ.ಶೇಷಾದ್ರಿ, ‘‘ತಿಮ್ಮನ ಮೊಟ್ಟೆಗಳು’ ಚಿತ್ರದ ನಿರ್ದೇಶಕರನ್ನು ಭೇಟಿ ಮಾಡುವ ಮುನ್ನವೇ ನಾನು ಚಿತ್ರವನ್ನು ಕೋಲ್ಕತ್ತಾ ಫಿಲಂ ಫೆಸ್ಟಿವಲ್‌ನಲ್ಲಿ ನೋಡಿದ್ದೆ. ಅಲ್ಲಿ ಪ್ರದರ್ಶನಗೊಂಡ ಕನ್ನಡದ ಎರಡು ಸಿನಿಮಾಗಳಲ್ಲಿ ಇದು ಒಂದಾಗಿತ್ತು. ಅಂತಹ ಪ್ರತಿಷ್ಠಿತ, ಯಾವ ರಾಜಿಗೂ ಬೀಳದ ಫೆಸ್ಟಿವಲ್‌ನಲ್ಲಿಯೇ ಕನ್ನಡ ಸಿನಿಮಾ ಪ್ರದರ್ಶನಗೊಂಡಿರುವಾಗ ನಮ್ಮದೇ ಬೆಂಗಳೂರು ಚಿತ್ರೋತ್ಸವದಲ್ಲಿ ಈ ಸಿನಿಮಾ ಯಾಕೆ ಪ್ರದರ್ಶನಗೊಳ್ಳಲಿಲ್ಲ?’ ಎಂದು ಪ್ರಶ್ನಿಸಿದರು. ರಕ್ಷಿತ್, ‘ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಈ ಚಿತ್ರ ಚರ್ಚಿಸುತ್ತದೆ. ಮುಖ್ಯವಾಗಿ ಕಾಳಿಂಗ ಸರ್ಪಗಳ ರಕ್ಷಣೆ ಹಾಗೂ ಮನುಷ್ಯ ಸಂಬಂಧಗಳ ಮೇಲೆ ಕೂಡ ಬೆಳಕು ಚೆಲ್ಲಿದ್ದೇವೆ. ಎಂಟು ತಿಂಗಳು ಪ್ರಿ-ಪ್ರೊಡಕ್ಷನ್‌ಗಾಗಿಯೇ ಮೀಸಲಿಟ್ಟಿದ್ದೆವು’ ಎಂದು ಮಾಹಿತಿ ನೀಡುತ್ತಾರೆ. ಸುಚೇಂದ್ರ ಪ್ರಸಾದ್, ಕೇಶವ್, ಆಶಿಕಾ, ರಘು ರಾಮನಕೊಪ್ಪ, ಪ್ರಗತಿ ಪ್ರಭು ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net