ಡಿ.2ಕ್ಕೆ ಬಿಡುಗಡೆಯಾಗಲಿದೆ ಅನಂತ್​ ನಾಗ್, ದಿಗಂತ್​ ಅಭಿನಯದ 'ತಿಮ್ಮಯ್ಯ & ತಿಮ್ಮಯ್ಯ'

Thimmaiah and Thimmaiah 1
Published on

ಬೆಂಗಳೂರು: ಅನಂತ್​ ನಾಗ್​ ಮತ್ತು ದಿಗಂತ್​ ಅಭಿನಯದ 'ತಿಮ್ಮಯ್ಯ & ತಿಮ್ಮಯ್ಯ' ಚಿತ್ರದ ಎರಡನೇ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈಗ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದ್ದು, ಡಿ. 2ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ತಿಮ್ಮಯ್ಯ & ತಿಮ್ಮಯ್ಯ' ಚಿತ್ರದ ವಿಶೇಷತೆಯೆಂದರೆ ತಾತ-ಮೊಮ್ಮಗನ ಸೆಂಟಿಮೆಂಟ್​. ಅನಂತನಾಗ್ ಹಾಗೂ ದಿಗಂತ್, ತಾತ - ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 30 ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಯಾವ ರೀತಿ ಇರಬಹುದು? ಎಂಬುದು ಈ ಚಿತ್ರದ ಕಥೆಯಂತೆ.

ಈ ಕುರಿತು ಮಾತನಾಡುವ ನಿರ್ದೇಶಕ ಸಂಜಯ್​ ಶರ್ಮ, '30 ವರ್ಷಗಳ ನಂತರ ತಾತ-ಮೊಮ್ಮಗ ಭೇಟಿಯಾಗುತ್ತಾರೆ. ಅಲ್ಲಿಂದ ಅವರಿಬ್ಬರ ಪ್ರಯಾಣ ಶುರುವಾಗುತ್ತದೆ. ಈ ಚಿತ್ರದಲ್ಲಿ ಅನಂತ್​ ನಾಗ್​ ಅವರು ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈ ಪಾತ್ರ ಒಪ್ಪುತ್ತಾರಾ? ಎಂಬ ಭಯವಿತ್ತು. ಒಪ್ಪಿದ್ದಷ್ಟೇ ಅಲ್ಲ, ಅವರು ನಮಗೆ ತುಂಬಾ ಇನ್​ಪುಟ್​ಗಳನ್ನು ಕೊಟ್ಟಿದ್ದಾರೆ' ಎನ್ನುತ್ತಾರೆ ಸಂಜಯ್​ ಶರ್ಮ.

ಇದೊಂದು ವಿಭಿನ್ನ ಪಾತ್ರ ಎನ್ನುವ ಅನಂತ್​ ನಾಗ್​, 'ಪಾತ್ರದ ಬಗ್ಗೆ ಓದಿದಾಗ ಖುಷಿಯಾಗುವುದರ ಜತೆಗೆ ಅತಂಕವೂ ಆಯ್ತು. ಏಕೆಂದರೆ, ಇಲ್ಲಿ ಒಂದಿಷ್ಟು ನೆಗೆಟಿವ್​ ಅಂಶಗಳಿವೆ. ಇದೊಂದು ಕಾಂಪ್ಲೆಕ್ಸ್​ ಆದಂತಹ ಪಾತ್ರ. ಇಲ್ಲಿ ನಾನು ಬಹಳ ಅಹಂಕಾರಿ ಮತ್ತು ಸ್ವಾರ್ಥಿಯ ಪಾತ್ರ ಮಾಡುತ್ತಿದ್ದೇನೆ. ಎಲ್ಲ ತರಹದ ಶೇಡ್​ಗಳಿವೆ' ಎನ್ನುತ್ತಾರೆ.

ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಲಿ ಲಾಂಛನದಲ್ಲಿ ರಾಜೇಶ್ ಶರ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡದವರೇ ಆಗಿರುವ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅನಂತ್​ ನಾಗ್​ ಮತ್ತು ದಿಗಂತ್​ ಜತೆಗೆ ಶುಭ್ರ ಅಯ್ಯಪ್ಪ, ಐಂದ್ರಿತಾ ರೇ, ಪ್ರಕಾಶ್​ ತುಮ್ಮನಿಆಡು ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net