

ಮುಂಬೈ: ಕೆಲವು ವರ್ಷಗಳ ಹಿಂದೆ ತಮ್ಮನ್ನು ಲೈಂಗಿಕವಾಗಿ ಶೋಷಿಸುವುದಕ್ಕೆ ಬಾಲಿವುಡ್ನ ಜನಪ್ರಿಯ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಪ್ರಯತ್ನಿಸಿದರು ಎಂದು ಪಾಯಲ್ ಘೋಶ್ ಆರೋಪಿಸಿದ್ದಷ್ಟೇ ಅಲ್ಲ, ಅನುರಾಗ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೀಗ ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹಾಯವನ್ನು ಕೇಳಿದ್ದಾರೆ. ಒಂದು ಪಕ್ಷ ವಿಚಾರಣೆ ತಡವಾದರೆ, ಈ ಮಾಫಿಯಾದವರು ನನ್ನನ್ನು ಸಾಯಿಸುತ್ತಾರೆ. ಆ ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ ಎಂದು ಟ್ವೀಟ್ ಮಾಡಿರುವ ಪಾಯಲ್, ನರೇಂದ್ರ ಮೋದಿ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಇದರ ಜತೆಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, 'ನಾನು ಸಹ ಸುಶಾಂತ್ ಸಿಂಗ್ ತರಹ ಸಾಯುವುದಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಏಕೆಂದರೆ, ಎಷ್ಟೇ ಈ ವಿಷಯದ ಬಗ್ಗೆ ಮಾತನಾಡಿದರೂ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಒಂದು ಪಕ್ಷ ನಾನು ಸತ್ತರೆ, ನನ್ನ ಸಾವು ಸಹ ಬೇರೆ ಕಲಾವಿದರ ತರಹವೇ ರಹಸ್ಯವಾಗಿ ಉಳಿದುಬಿಡುತ್ತದೆ' ಎಂದು ಪಾಯಲ್ ಬರೆದುಕೊಂಡಿದ್ದಾರೆ.
ಇನ್ನು ಅನುರಾಗ್ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವ ಕುರಿತು ಚಾನಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪಾಯಲ್, 'ಕೆಲವು ವರ್ಷಗಳ ಹಿಂದೆ ಅನುರಾಗ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದೆ. ಅವರು ನನ್ನ ಜತೆಗೆ ಬಹಳ ಕೆಟ್ಟದಾಗಿ ನಡೆದುಕೊಂಡರು. ಈ ಘಟನೆ ನಡೆದು ಹಲವು ವರ್ಷಗಳಾದರೂ, ಈಗಲೂ ನನ್ನನ್ನು ಕಾಡುತ್ತಿದೆ. ಈ ವಿಷಯದ ಕುರಿತಾಗಿ ಮಾತನಾಡಬೇಕು ಎಂದು ಎಷ್ಟೋ ಬಾರಿ ಪ್ರಯತ್ನಪಟ್ಟೆ. ಆದರೆ, ಕುಟುಂಬದವರು, ಸ್ನೇಹಿತರು ಇದಕ್ಕೆ ಒಪ್ಪಲಿಲ್ಲ. ಆದರೂ ನಾನು ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಮುಂದಾಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.