ನಿನ್ನ ಸಂಸಾರದ ಮೇಲೆ... ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿಗೆ ಪಂಜುರ್ಲಿ ದೈವದ ಎಚ್ಚರಿಕೆ! Rishab Shetty

Rishab Shetty
Published on

Rishab Shetty : ಕಾಂತಾರ ಸಿನಿಮಾದ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಪಟ್ಟ ಪಡೆದಿರುವ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿಗೆ ಶತ್ರುಗಳ ಕಾಟ ಹೆಚ್ಚಾಗಿದೆಯಂತೆ, ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಅವರ ಕುಟುಂಬದ ಮೇಲೆ ಕೆಲವರ ವಕ್ರ ದೃಷ್ಟಿ ಬಿದ್ದಿದ್ದು, ರಿಷಬ್​ ಅವರ ಸಂಸಾರ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರಂತೆ. ಹೀಗೊಂದು ಎಚ್ಚರಿಯನ್ನು ನೀಡಿದ್ದು, ಬೇರೆ ಯಾರೂ ಅಲ್ಲ, ಪಂಜುರ್ಲಿ ದೈವ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್​ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ಸಿನಿಮಾ ಬಳಿಕ ರಿಷಬ್​ ಅವರಿಗೆ ಡಿವೈನ್​ ಸ್ಟಾರ್​ ಎಂಬ ಬಿರುದು ಸಹ ಸಿಕ್ಕಿತು. ಇದೀಗ ಕಾಂತಾರ-2 ಸಿನಿಮಾದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಇದೇ ವರ್ಷ ಅಕ್ಟೋಬರ್​ 2ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

ಶೂಟಿಂಗ್​ನಿಂದ ವಿರಾಮ ಪಡೆದುಕೊಂಡಿರುವ ರಿಷಬ್​, ತಮ್ಮ ಕುಟುಂಬ ಸಮೇತ ಮಂಗಳೂರಿನ ಕದ್ರಿ ಬಾರೆಬೈಲ್​ನಲ್ಲಿ ನಡೆದ ವಾರಾಹಿ ಪಂಜುರ್ಲಿ, ಜಾರಾಂದಯ ದೈವದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಿಷಬ್​ ದೈವದ ಮೊರೆ ಹೋದರು. ಉತ್ಸವದ ಕೊನೆಯಲ್ಲಿ ದೈವದ ಬಳಿ ರಿಷಬ್​ ತಮ್ಮ ಕಷ್ಟವನ್ನು ಹೇಳಿಕೊಂಡರು. ಇದೇ ಸಮಯದಲ್ಲಿ ಪಂಜುರ್ಲಿ ದೈವ ರಿಷಬ್​ ಅವರಿಗೆ ಎಚ್ಚರಿಯನ್ನು ನೀಡಿದೆ.

ನಿನಗೆ ಶತ್ರುಗಳ ಕಾಟ ಹೆಚ್ಚಾಗಿದೆ. ನಿಮ್ಮ ಸಂಸಾರದ ಮೇಲೆ ಕೆಟ್ಟ ಕಣ್ಣು ಬಿದ್ದಿದೆ. ಕೆಲವರು ನಿನ್ನ ಸಂಸಾರವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲದೆ, ನೀವು ಮಾಡಿದ ಕೆಲಸ ಫಲ ನೀಡದಂತೆ ತಡೆಯಲು ಸಂಚು ರೂಪಿಸುತ್ತಿದ್ದಾರೆ. ತೊಂದರೆ ಅಂತ ನೀನು ನನ್ನ ಬಳಿ ಬಂದಿದ್ದೀಯಾ, ನೀನು ನಂಬಿದ ದೈವ ಕೈಬಿಡುವುದಿಲ್ಲ. ನಿನಗೆ ಯಾರು ಕೇಡು ಬಯಸುತ್ತಿದ್ದಾರೆ ಎಂಬುದನ್ನು ನಾನು ಈಗ ಹೇಳುವುದಿಲ್ಲ, ಅವರನ್ನು ನಾನೇ ನೋಡಿಕೊಳ್ಳುತ್ತೇನೆ. ನನಗೆ ಸೇವೆ ಮಾಡುವ ಹರಕೆಯನ್ನು ನೀನು ಕಟ್ಟಿಕೋ, ಇನ್ನು 5 ತಿಂಗಳಲ್ಲಿ ನಾನು ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ರಿಷಭ್​ ಅವರಿಗೆ ಪಂಜುರ್ಲಿ ದೈವ ಅಭಯ ನೀಡಿದೆ.

ಅಂದಹಾಗೆ ಕಾಂತಾರ-2 ಸಿನಿಮಾದ ಶೂಟಿಂಗ್​ ವೇಳೆ ರಿಷಬ್​ ಅವರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಈ ಹಿಂದೆ ಚಿತ್ರೀಕರಣದ ವಾಹನ ಅಪಘಾತಕ್ಕೀಡಾಗಿತ್ತು. ಇದಿಷ್ಟೇ ಅಲ್ಲದೆ. ಶೂಟಿಂಗ್​ಗೆ ಸ್ಫೋಟಕ ವಸ್ತುಗಳನ್ನು ಬಳಸಿದ ಆರೋಪವೂ ಕೂಡ ರಿಷಬ್​ ವಿರುದ್ಧ ಕೇಳಿಬಂದಿತ್ತು. ಸ್ಫೋಟಕ ವಸ್ತುಗಳಿಂದ ವನ್ಯಜೀವಿಗಳು ವಿಚಲಿತ ಆಗಲಿವೆ ಎಂದು ಆರೋಪಿಸಿದ್ದರು. ಇದರಿಂದ ಶೂಟಿಂಗ್​ಗೆ ಅಡ್ಡಿಯಾಗಿತ್ತು. ಒಂದಿಲ್ಲೊಂದು ಸಮಸ್ಯೆಗಳು ಎದುರಾದ್ದರಿಂದ ರಿಷಬ್​ ದೈವದ ಮೋರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net