

ಬೆಂಗಳೂರು: ಸದ್ಯ ಲಾಕ್ಡೌನ್ ಪ್ರಿಯರಿಗೆ ಸಿನಿಮಾಗಳೇ ಮನರಂಜನೆಯ ಸರಕಾಗಿವೆ. ನಿತ್ಯ ಒಟಿಟಿ ವೇದಿಕೆಯಲ್ಲಿನ ಹೊಸ ಹೊಸ ಸಿನಿಮಾಗಳನ್ನು ನೋಡುವುದೇ ದೊಡ್ಡ ಕೆಲಸ. ಅದನ್ನೇ ಎನ್ಕ್ಯಾಶ್ ಮಾಡಿಕೊಂಡಿರುವ ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಒಂದಿಲ್ಲೊಂದು ಹೊಸ ಹೊಸ ಸಿನಿಮಾ, ವೆಬ್ ಸಿರೀಸ್ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಕನ್ನಡದ ಹಲವು ಸಿನಿಮಾಗಳೂ ಪ್ರದರ್ಶನವಾಗುತ್ತಿವೆ. ಇದೀಗ ಕರುನಾಡ ಪ್ರೇಕ್ಷಕರಿಗೆ ಮತ್ತೆರಡು ಸಿನಿಮಾಗಳು ಅಮೆಜಾನ್ನಲ್ಲಿ ಲಭ್ಯವಾಗಿವೆ.
ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ, ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದ ‘ಆಯುಷ್ಮಾನ್ ಭವ’ ಸಿನಿಮಾ ಸದ್ಯ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ. ಕಳೆದ ವರ್ಷ ನವೆಂಬರ್ 1ರಂದು ಬಿಡುಗಡೆಯಾಗಿದ್ದ ಈ ಸಿನಿಮಾ, ಹೇಳಿಕೊಳ್ಳುವಂತ ಯಶಸ್ಸು ಕಾಣದಿದ್ದರೂ, ಪಿ.ವಾಸು ಮತ್ತು ಶಿವರಾಜ್ಕುಮಾರ್ ಮತ್ತು ದ್ವಾರಕೀಶ್ ಕಾಂನಿನೇಷನ್ ಸಿನಿಮಾ ಎಂಬ ಕಾರಣಕ್ಕೆ ಸದ್ದು ಮಾಡಿತ್ತು. ಅನಂತ್ ನಾಗ್, ರಚಿತಾ ರಾಮ್, ಸುಹಾಸಿನಿ ಸೇರಿ ಹಲವರು ಈ ಸಿನಿಮಾದಲ್ಲಿದ್ದರು.
ಅದೇ ರೀತಿ ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬಂದಿದ್ದ, ‘ಪಡ್ಡೆಹುಲಿ’ ಚಿತ್ರವೂ ಸಹ ಅಮೆಜಾನ್ನಲ್ಲಿ ಬಿಡುಗಡೆ ಆಗಿದೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್, ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು.
ಇನ್ನು ಇತ್ತೀಚೆಗಷ್ಟೇ ಶ್ರೀನಿ ಅವರ ‘ಬೀರಬಲ್’ ಮತ್ತು ‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾಗಳು ಅಮೆಜಾನ್ನಲ್ಲಿ ಬಿಡುಗಡೆಯಾಗಿದ್ದವು.