ಶೂಟಿಂಗ್ ಮಿಸ್ ಆಗ್ತಿದೆ

sree
Published on

ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡ ಸಿನಿಮಾ, ರಕ್ಷಿತ್ ಶೆಟ್ಟಿ ಜತೆಗಿನ ‘ಅವನೇ ಶ್ರೀಮನ್ನಾರಾಯಣ’. ಈ ಚಿತ್ರ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿತ್ತು. ಆ ನಂತರ, ಶಾನ್ವಿ ಸುದ್ದಿಯೇ ಇರಲಿಲ್ಲ.

ಇಷ್ಟಕ್ಕೂ ಅವರೆಲ್ಲಿ ಮಾಯವಾಗಿದ್ದಾರೆ ಎಂದು ಹುಡುಕಹೊರಟರೆ, ಮುಂಬೈನಲ್ಲಿ ಇರುವುದಾಗಿ ಹೇಳುತ್ತಾರೆ ಶಾನ್ವಿ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮುಂಬೈನ ಅಪಾರ್ಟ್​ವೆುಂಟ್​ನಲ್ಲಿ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿರುವ ಶಾನ್ವಿ, ಅವಶ್ಯಕತೆ ಇರುವವರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ಜತೆಗೆ ಅದೇ ಗ್ಯಾಪ್​ನಲ್ಲಿ ಅಡುಗೆಯನ್ನೂ ಕಲಿತಿದ್ದಾರಂತೆ.

ಅಡುಗೆ ಮಾಡಲು ಕಲಿತ ಶಾನ್ವಿ: ‘ನಿಜವಾಗ್ಲೂ ನಾನು ಇಷ್ಟೊಂದು ದಿನಗಳ ಕಾಲ ಮನೆಯಲ್ಲಿ ಇರಲೇ ಇಲ್ಲ. ಒಂದಲ್ಲ ಒಂದು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುತ್ತಿದ್ದೆ. ಲಾಕ್​ಡೌನ್ ಶುರುವಾಗಿದ್ದರಿಂದ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದೇನೆ. ಆದಷ್ಟು ಬೇಗ ಶೂಟಿಂಗ್ ಶುರುವಾಗಲಿ ಎಂದು ದೇವರ ಹತ್ತಿರ ಬೇಡಿಕೊಳ್ಳುತ್ತಿದ್ದೇನೆ. ಈ ಲಾಕ್​ಡೌನ್ ಅವಧಿಯಲ್ಲಿ ಅಮ್ಮನ ಜತೆಗೆ ಬಗೆಬಗೆ ಅಡುಗೆ ಮಾಡುವುದನ್ನು ಕಲಿತಿದ್ದೇನೆ. ಎಂದಿನಂತೆ ಒಂದಷ್ಟು ಸಿನಿಮಾಗಳನ್ನು ವೀಕ್ಷಿಸುತ್ತಿದ್ದೇನೆ’ ಎನ್ನುತ್ತಾರೆ ಶಾನ್ವಿ.

ತಮಿಳಿನಲ್ಲಿ ಹೆಚ್ಚಿದ ಅವಕಾಶ: ಇನ್ನು ಸಚಿನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತೆಲುಗು, ತಮಿಳಿನಲ್ಲಿ ತೆರೆಕಂಡು ಒಂದಷ್ಟು ಸಣ್ಣಪುಟ್ಟ ಏರಿಳಿತಗಳನ್ನು ಹೊರತುಪಡಿಸಿದರೆ, ಒಟ್ಟಾರೆಯಾಗಿ ಒಳ್ಳೇ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದ ಶಾನ್ವಿಯನ್ನು ಅಲ್ಲಿನ ಪ್ರೇಕ್ಷಕ ಇಷ್ಟಪಟ್ಟಿದ್ದ. ಹಾಗೇ ಆಯಾ ಚಿತ್ರರಂಗದ ನಿರ್ವಪಕರು, ನಿರ್ದೇಶಕರೂ ಶಾನ್ವಿಯನ್ನು ಗುರುತಿಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿಯೇ ಹಲವರು ಫೋನ್ ಮೂಲಕ ಸಂರ್ಪಸಿ ಸಿನಿಮಾ ಬಗ್ಗೆ ರ್ಚಚಿಸಿದ್ದಾರೆ. ‘ಸಿನಿಮಾ ತೆರೆಕಂಡ ಬಳಿಕ ತೆಲುಗು ಮತ್ತು ತಮಿಳಿನಿಂದ ಸಾಕಷ್ಟು ಸಿನಿಮಾ ಅವಕಾಶಗಳು ಬಂದವು. ತೆಲುಗಿಗಿಂಥ ತಮಿಳಿನ ಒಂದು ಕಥೆ ಇಷ್ಟ ಆಗಿದೆ. ಆದರೆ, ಆ ಬಗ್ಗೆ ಈಗಲೇ ಹೇಳುವುದು ಬೇಡ. ಒಳ್ಳೇ ಕಥೆ, ನನಗೆ ಸೂಟ್ ಆಗಲಿದೆ ಅನಿಸಿದೆ. ಸದ್ಯಕ್ಕೆ ಲಾಕ್​ಡೌನ್ ಇರುವುದರಿಂದ ಸಿನಿಮಾ ಕೆಲಸಗಳೆಲ್ಲವೂ ನಿಂತಿವೆ. ಅದು ಮುಗಿದ ಬಳಿಕವಷ್ಟೇ ಆ ಚಿತ್ರದ ಅಪ್​ಡೇಟ್ ಗೊತ್ತಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಶಾನ್ವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net