ಗಂಡ-ಗುಂಡನ ಸೆಂಟಿಮೆಂಟ್

gunda jan 24 2020
Published on

ಬೆಂಗಳೂರು: ಆಕ್ಷನ್ ದೃಶ್ಯಗಳು, ಉದ್ದುದ್ದ ಡೈಲಾಗ್ಸ್, ಪ್ರೀತಿ-ಪ್ರೇಮ ಕುರಿತ ಕಥೆ.. ಇದು ಇತ್ತೀಚಿನ ಸಿನಿಮಾಗಳಲ್ಲಿ ಕಂಡುಬರುವ ಎಲಿಮೆಂಟ್ಸ್. ಆದರೆ ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಇವುಗಳ ಅಬ್ಬರವಿಲ್ಲ. ಇಲ್ಲಿರುವುದು ನಾಯಿ ಮತ್ತು ಮನುಷ್ಯನ ನಡುವಿನ ಸೆಂಟಿಮೆಂಟ್. ಮನುಷ್ಯ ಮತ್ತು ನಾಯಿಯ ಸಂಬಂಧ ತಿಳಿಸುವ ಈ ಚಿತ್ರದ ಉದ್ದಕ್ಕೂ ಕೇಳಿಬರುವುದು ಒಂದೇ ಹೆಸರು ಗುಂಡ. ಅಂದರೆ ‘ಗುಂಡ’ ಎಂಬ ನಾಯಿಯ ಬಗ್ಗೆ. ಚಿತ್ರದಲ್ಲಿ ನಾಯಿಯೇ ಹೀರೋ, ನಾಯಿಯೇ ವಿಲನ್!

ಅನಿರೀಕ್ಷಿತವಾಗಿ ಆಟೋ ಚಾಲಕನ ಮನೆ ಸೇರುವ ನಾಯಿ, ಎಷ್ಟೇ ವಿರೋಧಿಸಿದರೂ, ದೂರದಲ್ಲಿ ಬಿಟ್ಟುಬಂದರೂ ಆತ ಇದ್ದಲ್ಲಿಯೇ ಬರುತ್ತದೆ. ಬಿಡುವುದು-ಬರುವುದು ಸರ್ಕಸ್ ಮಧ್ಯೆ ಆತನಿಗೆ ನಾಯಿ ಹತ್ತಿರವಾಗುತ್ತದೆ. ಕೊನೆಗೆ ಆತನ ಮನೆ ಸೇರುತ್ತದೆ. ಆತನಿಗೆ ನಾಯಿಯೇ ಸರ್ವಸ್ವವಾದರೆ, ಪತ್ನಿಗೆ ನಾಯಿ ಎಂದರೆ ಅನಿಷ್ಟ-ಕನಿಷ್ಠ. ಮಕ್ಕಳಿಲ್ಲದ ಆ ಮನೆಯಲ್ಲಿ ಮಗುವಿನ ಸ್ಥಾನ ಪಡೆದು, ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ನಾಯಿ, ತನ್ನಿಂದ ದೂರವಾಗಿದ್ದ ಅವರನ್ನು ಮತ್ತೆ ಸೇರಿಸುತ್ತದೆ. ಬಳಿಕ ನಾಯಿ ಆಕೆಗೆ ಇಷ್ಟವಾಗುತ್ತದೆಯಾ? ನಾಯಿ ಮತ್ತು ಆಟೋ ಚಾಲಕನ ನಡುವೆ ಬಾಂಧವ್ಯ ಹೇಗಿರುತ್ತದೆ? ಈ ಇಬ್ಬರ ಜೀವನದಲ್ಲಿ ನಾಯಿ ಯಾವ ಮಹತ್ವ ಪಡೆಯುತ್ತದೆ ಎಂಬುದನ್ನು ಚಿತ್ರಮಂದಿರದಲ್ಲೇ ತಿಳಿಯಬೇಕು.

ಆಟೋ ಚಾಲಕನ ಪಾತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ಆತನ ಪತ್ನಿಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಒಂದಷ್ಟು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿ ಹಾಸ್ಯಪ್ರತಿಭೆಯಿಂದ ಗುರುತಿಸಿಕೊಂಡಿದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್, ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಎನ್ನಲಾಗದಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಇನ್ನು ಸಂಯುಕ್ತಾ ಗೃಹಿಣಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರ ನೋಡುವಾಗ, ‘ನಾಯಿಯೂ ಹೀಗೆ ಅಭಿನಯಿಸಲು ಸಾಧ್ಯವೇ?’ ಎಂದು ಹುಬ್ಬೇರಿಸುವುದು ಖಂಡಿತ. ನಟನ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸಿರುವ ಗೋವಿಂದೇಗೌಡ, ಪ್ರೇಕ್ಷಕರನ್ನು ನಗಿಸಲು ಪ್ರಯತ್ನಪಟ್ಟು ವಿಫಲರಾದರೂ ಚಿತ್ರದ ಉದ್ದಕ್ಕೂ ನಾಯಕನಿಗೆ ಸಾಥ್ ಕೊಡುತ್ತಾರೆ. ಇನ್ನು ಉಳಿದ ಪಾತ್ರಗಳು ಸಂದರ್ಭಕ್ಕೆ ತಕ್ಕಂತೆ ಹಾಗೆ ಬಂದು ಹೀಗೆ ಹೋಗಿಬಿಡುತ್ತವೆ.

ಕಥೆಯಲ್ಲಿ ಇನ್ನಷ್ಟು ಸತ್ವ ಇರಬೇಕಿತ್ತು. ಎರಡೂವರೆ ಗಂಟೆ ಸಮಯ ಭರ್ತಿ ಮಾಡಲು ಅನವಶ್ಯಕವಾಗಿ ಕೆಲವು ದೃಶ್ಯಗಳನ್ನು ತುರುಕಿದಂತಿದೆ. ನಿರ್ದೇಶಕ ಶ್ರೀನಿವಾಸ್ ತಮ್ಮಯ್ಯಗೆ ಇದು ಹೊಸ ಪ್ರಯತ್ನ, ನಿರ್ದೇಶನದಲ್ಲಿ ಅವರು ಇನ್ನಷ್ಟು ಮಾಗಬೇಕಿದೆ. ಚಿದಾನಂದ್ ಕ್ಯಾಮೆರಾ ವರ್ಕ್, ಕಾರ್ತಿಕ್ ಶರ್ಮಾ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಆರೂ ಹಾಡುಗಳು ಗುನುಗುವಂತಿವೆ. ಒಂದೊಳ್ಳೆಯ ಕಥೆ ಇದ್ದರೂ ಹಣ ಹೂಡಲು ಹಿಂದೆಮುಂದೆ ನೋಡುವ ನಿರ್ವಪಕರ ಮಧ್ಯೆ ನಾಯಿ ಕುರಿತ ಸಿನಿಮಾಗೆ ಬಂಡವಾಳ ಹೂಡಿರುವ ರಘು ಹಾಸನ್ ಧೈರ್ಯ ಮೆಚ್ಚುವಂತದ್ದು. ಹೊಸ ಪ್ರತಿಭೆಗಳ ಈ ಪ್ರಯೋಗಾತ್ಮಕ ಸಿನಿಮಾ ಒಂದು ಬಾರಿ ನೋಡಲು ಯೋಗ್ಯವಾಗಿದೆ.

ಚಿತ್ರ: ನಾನು ಮತ್ತು ಗುಂಡ ನಿರ್ದೇಶನ: ಶ್ರೀನಿವಾಸ್ ತಮ್ಮಯ್ಯ ನಿರ್ವಣ: ರಘು ಹಾಸನ್ ಪಾತ್ರವರ್ಗ: ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತಾ ಹೊರನಾಡು, ರಾಕ್​ಲೈನ್ ಸುಧಾಕರ್, ಗೋವಿಂದೇಗೌಡ, ಎ.ವಿ. ರವಿ ಮತ್ತಿತರರು

ಶಿವರಾಯ ಪೂಜಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net