ಸುದೀಪ್​ ಯಾಕೆ ಒಪ್ಪಲಿಲ್ಲ ಎಂದು ಗೊತ್ತಿಲ್ಲ: ಸುಧಾಕರ್​

Sudeep - Final
Published on

ಕರೊನಾ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಮಿಸಿರುವ ಬದಲಾಗು ನೀನು ಎಂಬ ವಿಡಿಯೋ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರೆಲ್ಲಾ ಕಾಣಿಸಿಕೊಂಡಿದ್ದಾರೆ. ಆದರೆ, ಈ ಹಾಡಿನಲ್ಲಿ ಸುದೀಪ್​ ಮಾತ್ರ ಕಾಣಿಸಿಕೊಂಡಿಲ್ಲ ಎಂಬುದು ಕೆಲವು ದಿನಗಳಿಂದ ಸಾಕಷ್ಟು ಚರ್ಚೆಯಾಗಿತ್ತು. ಸುದೀಪ್​ ಯಾಕೆ ಮಿಸ್​ ಆದರು, ಎಂದು ಇದೀಗ ಬಹಿರಂಗವಾಗಿದೆ.

ಬದಲಾಗು ನೀನು ಹಾಡಿನಲ್ಲಿ ಸುದೀಪ್​ ಮಾತ್ರ ಇಲ್ಲದಿರುವುದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಡನ್ನು ನಿರ್ದೇಶಿಸಿರುವ ನಿರ್ದೇಶಕ ಪವನ್​ ಒಡೆಯರ್​ ಮೇಲೆ ಸೋಷಿಯಲ್​ ಮೀಡಿಯಾದಲ್ಲಿ ಹರಿಹಾಯ್ದಿದ್ದರು. ಈ ಹಾಡಿನಲ್ಲಿ ಸುದೀಪ್​ ಇಲ್ಲದಿರುವುದರಿಂದ ತಮಗೆ ಬೇಸರವಾಗಿದ್ದು, ಹಾಡು ಬಿಡುಗಡೆಯಾದ ನಂತರ ಸುದೀಪ್​ ಅಭಿಮಾನಿಗಳೆಲ್ಲಾ ಡಿಸ್ಲೈಕ್​ ಮಾಡುವುದಾಗಿ ಕೆಲವರು ಹೇಳಿದ್ದರು.

ಹಾಡಿನ ಬಿಡುಗಡೆ ಸಮಯದಲ್ಲಿ ಈ ಕುರಿತು ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಎಲ್ಲ ಕಲಾವಿದರಿಗೂ ನಾನೇ ಕರೆ ಮಾಡಿ ಮನವಿ ಮಾಡಿದ್ದೆ. ಸುದೀಪ್ ಅವರಿಗೂ ಆಹ್ವಾನಿಸಿದ್ದೆವು. ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಅವರ ಮ್ಯಾನೇಜರ್ ಅವರಿಗೂ ತಿಳಿಸಿದ್ದೆವು. ಆದರೆ ಅವರೇಕೆ ಒಪ್ಪಿಗೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮೊಟ್ಟಿಗೆ ಸೇರಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಬದಲಾಗು ನೀನು ಹಾಡಿನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್​ಗಳಲ್ಲದೆ, ಕ್ರೀಡಾ ಲೋಕದ ಖ್ಯಾತನಾಮರು ಸಹ ಭಾಗವಹಿಸಿದ್ದಾರೆ. ಶಿವರಾಜಕುಮಾರ್, ಉಪೇಂದ್ರ, ದರ್ಶನ್, ರವಿಚಂದ್ರನ್, ಯಶ್​, ಉಪೇಂದ್ರ, ಗಣೇಶ್, ರವಿಶಂಕರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್, ಶಾನ್ವಿ ಶ್ರೀವಾತ್ಸವ್, ಸುಮಲತಾ ಅಂಬರೀಷ್​​, ರಕ್ಷಿತ್ ಶೆಟ್ಟಿ, ಅಭಿಷೇಕ್​ ಅಂಬರೀಷ್​, ಆಶಿಕಾ ರಂಗನಾಥ್, ರಾಕ್‌ಲೈನ್ ವೆಂಕಟೇಶ್, ಕ್ರಿಕೆಟಿಗ ರಾಹುಲ್​ ದ್ರಾವಿಡ್​, ಅನಿಲ್ ಕುಂಬ್ಳೆ ಮುಂತಾದವರು ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net