

ದ ಪ್ಯಾರಡೈಸ್ ಸಿನಿಮಾ ನೋಡಲು ರೇವಂತ್ ರೆಡ್ಡಿಗೆ ಭದ್ರತೆ ಬಗ್ಗೆ ಮನವಿ ಮಾಡಿದ ನಾನಿ
ಪುಷ್ಪಾ ಸಿನಿಮಾ ರಿಲೀಸ್ ಆದ ವೇಳೆ ಸಂಭವಿಸಿದ್ದ ದುರಂತ ತಡೆಯಲು ಪ್ಲ್ಯಾನ್
ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಲಹೆ
ಪುಷ್ಪಾ ದಿ ರೈಸ್ ಸಿನಿಮಾ ರಿಲೀಸ್ ಆದ ವೇಳೆ ಉಂಟಾಗಿದ್ದ ಕಾಲ್ತುಳಿತ ಮತ್ತು ಆಸ್ತಿ-ಪಾಸ್ತಿ ನಾಶ ಪ್ರಕರಣವು ಮತ್ತೆ ಮರುಕಳಿಸದಂತೆ ತಡೆಯಲು ತೆಲಂಗಾಣ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಫ್ಯಾನ್ಸ್ ಜೊತೆ 'ದ ಪ್ಯಾರಡೈಸ್' ಸಿನಿಮಾ ನೋಡಲು ಬಯಸಿದ ನಾನಿಗೆ ಅರ್ಜಿ ಸಲ್ಲಿಸಲು ಸಿಎಂ ರೇವಂತ್ ರೆಡ್ಡಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದ ಪ್ಯಾರಡೈಸ್ ಸಿನಿಮಾವು ಇದೇ 24ರಂದು ರಿಲೀಸ್ ಆಗಲಿದೆ. ಈ ಹಿನ್ನೆಲೆ ಸಾಕಷ್ಟು ಬೆಳವಣಿಗೆ ಯಉಂಟಾಗುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯ ಇರುವ ಕಾರಣ ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಿತ್ತು.
'ದ ಪ್ಯಾರಡೈಸ್' ಸಿನಿಮಾ ಪ್ರೀಮಿಯರ್ ಶೋ ನೋಡಲು ಫ್ಯಾನ್ಸ್ ಜೊತೆ ಸಿನಿಮಾ ನೋಡಲು ಚಿತ್ರತಂಡ ಬಯಸಿದ್ದು, ಅವಕಾಶ ನೀಡುವಂತೆ ಸಿಎಂ ರೇವಂತ್ ರೆಡ್ಡಿ ಹಾಗೂ ಸಚಿವ ಕೋಮತಿ ವೆಂಕಟ್ ರೆಡ್ಡಿ ಅವರನ್ನು ಟ್ಯಾಗ್ ಮಾಡಿ ಬೇಡಿಕೆ ಇಟ್ಟಿದ್ದರು. ನಾವು ಜಾರಿಯಲ್ಲಿರುವ ಎಲ್ಲ ಪ್ರೋಟೋಕಾಲ್ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.
ಇದಕ್ಕೆ ರೇವಂತ್ ರೆಡ್ಡಿ ಅವರು ಪ್ರತಿಕ್ರಿಯೆ ಕೊಟ್ಟಿದ್ದು, ಪ್ರೀತಿಯ ನಾನಿ ಸುರಕ್ಷತೆ ಬಗ್ಗೆ ನೀವು ತೋರಿಸಿರುವ ಗೌರವ ಮತ್ತು ನಿರ್ದೇಶಕ ಒಡೆಲಾ ಶ್ರೀಕಾಂತ್ ಅವರ ನಿರ್ದೇಶನದ ಸಿನಿಮಾದ ಮೇಲೆ ನಿಮಗಿರುವ ಬದ್ಧತೆಯು ಅದ್ಭುತ. ಜನಸಂದಣಿ ತಡೆಯಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ದಯವಿಟ್ಟು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ಅರ್ಜಿಯನ್ನು ಸಲ್ಲಿಸಿ. ಪೊಲೀಸ್ ತಂಡ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.